ಬೆಂಗಳೂರು: ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ SSLC ಪರೀಕ್ಷೆ ನಾಳೆಯಿಂದ ನಡೆಯಲಿದೆ. ನಾಳೆಯ ಪರೀಕ್ಷೆಗೆ ಕೌಂಟ್ಡೌನ್ ಶುರುವಾಗಿದ್ದು, ಪರೀಕ್ಷಾ ಕೇಂದ್ರದ ಸಿದ್ಧತೆಗಳನ್ನು ಸಚಿವ ಎಸ್.ಸುರೇಶ್ ಕುಮಾರ್ ಖುದ್ದು ಪರಿಶೀಲಿಸಿದರು.
ನಗರದ ಮಲ್ಲೇಶ್ವರಂನ ನಿರ್ಮಲಾ ರಾಣಿ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಪರೀಕ್ಷಾ ಕೇಂದ್ರಗಳಿಗೆ ಔಷಧಿ ಸಿಂಪಡಣೆ ಮಾಡಿರುವುದನ್ನು ಖಚಿತಪಡಿಸಿಕೊಂಡರು. ಇದೇ ವೇಳೆ ಶಾಲಾ ಗೇಟ್ನಲ್ಲಿ ಸಚಿವರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆವರಣದ ಒಳಗೆ ಮತ್ತು ಹೊರಗೆ ಅಂತರ ಕಾಯ್ದುಕೊಳ್ಳುವ ಬಾಕ್ಸ್ಗಳನ್ನು ಹಾಕುವಲ್ಲಿ ಸಿಬ್ಬಂದಿ ನಿರತರಾಗಿದ್ದರು. ಕೇಂದ್ರದ ಪ್ರತಿ ತರಗತಿಗೂ ತೆರಳಿದ ಸುರೇಶ್ ಕುಮಾರ್ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳಿಗೆ ನಾವೇ ಮಾಸ್ಕ್ ನೀಡುತ್ತೇವೆ. ಕೇಂದ್ರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಈ ಹಿಂದಿನ ಬಾರಿ ಪಿಯು ಪರೀಕ್ಷೆಯಲ್ಲಾದ ತಪ್ಪುಗಳು ಮರುಕಳಿಸದು. ವಿದ್ಯಾರ್ಥಿಗಳು ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದರು.
ಪರೀಕ್ಷಾ ಕೊಠಡಿಯಲ್ಲಿ ಜಿಗ್ ಜಾಗ್ ರೀತಿಯಲ್ಲಿ ಒಂದು ಬೆಂಚಿನಲ್ಲಿ ಒಬ್ಬ ವಿದ್ಯಾರ್ಥಿ ಕೂರಲು ಅನುವು ಮಾಡಿಕೊಡಲಾಗಿದೆ. ಹಾಲ್ ಟಿಕೆಟ್ ನೊಂದಿಗೆ ಮಾಸ್ಕ್ಗಳನ್ನು ನೀಡಲಾಗಿದೆ. ಒಂದು ವೇಳೆ ಮಾಸ್ಕ್ ಮರೆತು ಬಂದರೆ ಶಾಲಾ ಆವರಣದಲ್ಲಿ ಮಾಸ್ಕ್ ಅನ್ನು ವಿತರಣೆ ಮಾಡುವ ವ್ಯವಸ್ಥೆ ಇದೆ.
ಒಂದು ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳು ಮಾತ್ರ ಕೂರಲಿದ್ದು, ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.