ಬೆಂಗಳೂರು : ಸಚಿವ ಆರ್.ಅಶೋಕ್ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀವು ಕೂಡ ಆರ್.ಅಶೋಕ್ ಅವರ ಪ್ರಾಥಮಿಕ ಸಂಪರ್ಕಿತರ ಪಟ್ಟಿಗೆ ಬರುತ್ತೀರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಸುಧಾಕರ್, ಅವರ ಸಂಪರ್ಕಕ್ಕೆ ಬಂದ ದಿನ ನಾನು ಮಾಸ್ಕ್ ಹಾಕಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ ದಿನ ಆರ್. ಅಶೋಕ್ ಅವರನ್ನು ಭೇಟಿಯಾಗಿದ್ದು, ನಾನು ಮಾಸ್ಕ್ ಹಾಕಿದ್ದೆ. ಅವರೂ ಮಾಸ್ಕ್ ಹಾಕಿದ್ದರು. ಎರಡು ದಿನದ ಹಿಂದೆ ನಾನು ಸಿಎಂ ಕೋವಿಡ್ ಟೆಸ್ಟ್ ಮಾಡಿಸಿದ್ದೀವಿ, ಆಗ ನೆಗೆಟಿವ್ ರಿಪೋರ್ಟ್ ಬಂದಿದೆ. ಬೇಕಾದರೆ ಸರ್ಟಿಫಿಕೇಟ್ ತೋರಿಸುತ್ತೇನೆ, ನೋಡಿಕೊಳ್ಳಿ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.
ಮೊದಲ ಹಾಗೂ ಎರಡನೇ ಅಲೆಯ ಸಂರ್ಭದಲ್ಲಿ ನಾನು ಈ ತನಕ 50ರಿಂದ 60 ಬಾರಿ ಕೋವಿಡ್ ಟೆಸ್ಟ್ ಮಾಡಿಸಿದ್ದೀನಿ. ಈವರೆಗೂ ಪಾಸಿಟಿವ್ ಬಂದಿಲ್ಲ. ರಾಜ್ಯದ ಜನರ ಆಶೀರ್ವಾದದಿಂದ ಪಾಸಿಟಿವ್ ಆಗಿಲ್ಲ ಎಂದು ಸುಧಾಕರ್ ತಿಳಿಸಿದರು.
ಐದಾರು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ : ಹೊಸ ಪ್ರಬೇಧ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಇದು ಸಂಪೂರ್ಣ ಲಾಕ್ಡೌನ್ ಅಲ್ಲ. ಜನರಲ್ಲಿ ಶಿಸ್ತು ಬರಲು ಕರ್ಫ್ಯೂ ಜಾರಿ ಮಾಡಲಾಗಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರೆ ಸೋಂಕು ನಿಯಂತ್ರಣ ಸಾಧ್ಯತೆ ಇದೆ.
ನಿನ್ನೆ ಬೆಂಗಳೂರಿನಲ್ಲಿ ಶೇ.7.8ರಷ್ಟು ಪಾಸಿಟಿವಿಟಿ ಆಗಿದೆ. ಐದಾರು ಜಿಲ್ಲೆಗಳಲ್ಲಿ ಕೇಸ್ಗಳ ಸಂಖ್ಯೆ ಜಾಸ್ತಿ ಆಗಿದೆ. ಮೊದಲನೇ, ಎರಡನೇ ಅಲೆಗಳಲ್ಲಿ ನಾವು ಬಹಳ ಅನುಭವಿಸಿದ್ದೇವೆ. ಎಲ್ಲ ತಿಳಿದೂ ಯಾವ ಕ್ರಮ ಕೂಡ ತೆಗೆದುಕೊಳ್ಳದೇ ಇರೋದು ಸರಿಯಲ್ಲ. ಹಾಗಾಗಿ, ಮೊದಲಿನಿಂದಲೇ ನಿಯಂತ್ರಣ ಮಾಡಬೇಕು ಎಂಬ ಕಾರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸುಧಾಕರ್ ಹೇಳಿದ್ದಾರೆ.
ನಾವು ಪಾದಯಾತ್ರೆಗೆ ವಿರೋಧ ಮಾಡ್ತಿಲ್ಲ : ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರದ ಕಾನೂನು ನಿಯಮ ಪಾಲನೆ ಮಾಡದೇ ಇರೋದು ದುರಾದೃಷ್ಟ. ನಾವು ಪಾದಯಾತ್ರೆಗೆ ವಿರೋಧ ಮಾಡುತ್ತಿಲ್ಲ. ನೀವು ಯಾವ ರಾಜ್ಯದಲ್ಲಾದರೂ ಈ ರೀತಿ ವಿರೋಧ ಮಾಡೋದನ್ನ ನೋಡಿದ್ದೀರಾ..? ಇಡೀ ವಿಶ್ವದಲ್ಲೇ ಯಾವ ವಿರೋಧ ಪಕ್ಷ ಕೂಡ ಕೋವಿಡ್ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ.
ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಇಂಥಾ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಬಾರದು. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತಾ ಕರೆಯುವುದಕ್ಕೆ ಆಗುತ್ತದೆಯೇ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಹೇಗೆ ಅನ್ಸುತ್ತೆ? ಇದರ ಕನಿಷ್ಟ ತಿಳುವಳಿಕೆ ಅವರಿಗೆ ಇರಬೇಕಿತ್ತು.
ಕಾಂಗ್ರೆಸ್ನವರು ಕುದುರೆ ರೇಸ್ ಆದರೂ ಮಾಡಲಿ, ಮ್ಯಾರಾಥಾನ್ ಆದರೂ ಮಾಡಲಿ, ಈಗಾಗಲೇ ಅವರು ಜಟಕಾ ಗಾಡಿ, ಎತ್ತಿನ ಗಾಡಿ, ಸೈಕಲ್ನಲ್ಲಿ ಹೋಗಿದಾರೆ. ಈಗ ರೈಲಲ್ಲಾದರೂ ಹೋಗಲಿ, ಬಸ್ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಮಾಡೋದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಸುಧಾಕರ್ ಕಾಂಗ್ರೆಸ್ ನಾಯಕರ ಕಾಲೆಳೆದರು.
ಐ ಪಿಟಿ ಫಾರ್ ಹಿಮ್ : ಸುಧಾಕರ್ ಸ್ವಿಮ್ಮಿಂಗ್ ಮಾಡಿದ್ದಕ್ಕೆ ಕೇಸ್ ಹಾಕಲಿ ಎಂದ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರವರ ಮನೆಯಲ್ಲಿ ಸ್ವಿಮ್ಮಿಂಗ್ ಮಾಡಿಕೊಂಡರೆ ಮಾರ್ಗಸೂಚಿ ಅಡ್ಡಿ ಆಗುತ್ತಾ? ಅವರ ಅಜ್ಞಾನಕ್ಕೆ ಮರುಕ ವ್ಯಕ್ತಪಡಿಸುತ್ತೇನೆ. ಇಷ್ಟು ತಿಳಿವಳಿಕೆ ಇಲ್ಲವೇ, ಐ ಪಿಟಿ ಫಾರ್ ಹಿಮ್ ಎಂದು ಸುಧಾಕರ್ ವ್ಯಂಗ್ಯವಾಡಿದರು.
ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ನಾಯಕರು ಸಹಕಾರ ನೀಡಲಿ : ಗೃಹ ಸಚಿವ ಆರಗ ಜ್ಞಾನೇಂದ್ರ