ಬೆಂಗಳೂರು: ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳಿಂದ ರೈತರು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮಧ್ಯಾಹ್ನದ ವೇಳೆಗೆ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಇದೇ ಬೇಡಿಕೆ ಇಟ್ಟುಕೊಂಡು ಸೆ.27 ಕ್ಕೆ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್‌ಗೆ ರಾಜ್ಯದ ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳೂ ಕೈಜೋಡಿಸಲಿದ್ದಾರೆ. ಒಂದು ದಿನದ ಬಂದ್ ನಡೆಯಲಿದೆ. ಸೆ.15 ರಂದು ಈ ಬಗ್ಗೆ ಮತ್ತೆ ಸಭೆ ನಡೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ರೈತರು ಸಿಟಿ ರೈಲ್ವೆ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಆರಂಭಿಸಿದ್ದರು. ರೈತರನ್ನು ವಿಧಾನಸೌಧದತ್ತ ಹೋಗಲು ಬಿಡದೆ ಫ್ರೀಡಂ ಪಾರ್ಕ್ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸ್ ತಡೆದರು. ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ದೆಹಲಿ ಗಡಿಗಳಲ್ಲಿ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ 9 ತಿಂಗಳಾದರೂ ಸತ್ಯಾಗ್ರಹ ಮುಂದುವರಿದಿದೆ. ಭಾರತ ಸರ್ಕಾರ ಸುಗ್ರೀವಾಜ್ಞೆ ವಾಪಾಸು ಪಡೆಯಬೇಕೆಂದು ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಕೇವಲ ನೋಡುತ್ತಾ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ ರೈತರ ಜೊತೆ ಮುಕ್ತವಾಗಿ ಮಾತನಾಡಲು ತಿಳಿಸಿದೆ. ಒಂದೂವರೇ ತಿಂಗಳ ಕಾಲ ಎಲ್ಲಾ ತಟಸ್ಥಗೊಳಿಸಲು ಸುಪ್ರೀಂ ಕೋರ್ಟ್ ತಿಳಿಸಿತು. ನಂತರ ಕಮಿಟಿ ನೇಮಕ ಮಾಡಿತು. ಮೂರು ಜನರ ಕಮಿಟಿಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ರೈತರು ತಿರಸ್ಕರಿಸಿದ್ದಾರೆ. ಯಾಕಂದರೆ ಅವರು ಯಾರೂ ರೈತರ ಪರ ಇಲ್ಲ. ಈ ವರದಿಯನ್ನು ಕೋರ್ಟ್ ಒಪ್ಪಬಾರದು ಎಂದು ರಾಜ್ಯ ರೈತರ ಪರ ಮನವಿ ಮಾಡಿದರು.
ಇದರ ಜೊತೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ಚುನಾವಣೆ ಇರುವ ರಾಜ್ಯಕ್ಕೆ ತಕ್ಕಂತೆ ಅಲ್ಲಿಗೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿರುತ್ತದೆ. ರಾಜ್ಯ ಸರ್ಕಾರ ಇಲ್ಲಿನ ಸ್ಥಳೀಯ ಬೆಳೆಗಳಿಗೆ ಕೂಡಾ ಲಾಬಿ ಮಾಡಬೇಕಾಗುತ್ತದೆ. ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ನ್ಯಾಯಬದ್ಧವಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲು ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇನೆ ಎಂದಿದ್ದರು. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ಎಸ್‌ಎಪಿ (ಸ್ಟೇಟ್ ಅಡ್ವೈಸರಿ ಪ್ರೈಸ್) ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
'ಮೊದಲು ರಾಜ್ಯದಲ್ಲೇ ಕಾಯ್ದೆ ಜಾರಿ ಯಾಕೆ'?
ಪ್ರಮುಖವಾಗಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರಗಳು ಅದಕ್ಕೆ ಬೇಕಾದ ತಿದ್ದುಪಡಿ ಕಾನೂನು ತರಬೇಕು. ಇಲ್ಲವಾದಲ್ಲಿ ಅದು ನೆಪ ಮಾತ್ರಕ್ಕೆ ಕಾನೂನು ಆಗಲಿದೆ. 16 ರಾಜ್ಯಗಳಲ್ಲಿ ಬಿಜೆಪಿ ಇದ್ದು, ಯುಪಿ, ಹರಿಯಾಣ, ಉತ್ತರಾಖಂಡ ರಾಜ್ಯಗಳೂ ಇದರಲ್ಲಿ ಸೇರಿವೆ. ಇದನ್ನು ಮೊದಲು ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಲ್ಲೇ ಪ್ರಯೋಗಕ್ಕೆ ತಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಯಾಕೆ ತರಾತುರಿಯಲ್ಲಿ ಕಾಯ್ದೆ ಜಾರಿಗೆ ತರಲಾಯಿತು. ದೇಶದ ಇತರೆ ಯಾವುದೇ ರಾಜ್ಯದಲ್ಲಿ ಮಾಡದೇ ಇರುವುದು ರಾಜ್ಯದಲ್ಲಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಮಾರುಕಟ್ಟೆಗೆ 80ರಷ್ಟು ವ್ಯಪಾರ-ವಹಿವಾಟುಗಳು ಬರುತ್ತಿಲ್ಲ. 80ರಷ್ಟು ಮಾರುಕಟ್ಟೆಯ ಹೊರಗೆ ವಹಿವಾಟು ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ತೆರಿಗೆಯೂ ಬರುವುದಿಲ್ಲ ಎಂದರು. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಭೂಮಿ ಖರೀದಿ ಪ್ರಕ್ರಿಯೆ ಪ್ರಾರಂಭ ಆಗಿದೆ. ರೈತರ ಭೂಮಿಗೆ ಗಂಡಾಂತರ ಬಂದಾಗಿದೆ ಎಂದರು. ಜಾನುವಾರು ಹತ್ಯೆ ತಡೆ ಕಾಯ್ದೆಯಿಂದಾಗಿ ರೈತರ ಮೇಲೂ ಕ್ರಿಮಿನಲ್ ಕೇಸ್ ಹಾಕುವ ಕೆಲಸ ನಡೆಯುತ್ತಿದೆ. ರಾಯಚೂರಿನಲ್ಲಿ ಈ ಘಟನೆ ನಡೆದಿದೆ. ಈ ಎಲ್ಲಾ ಕಾರಣಗಳಿಂದ ಸಿಎಂ ಅಧ್ಯಕ್ಷತೆಯಲ್ಲಿ ಮುಕ್ತವಾಗಿ ರೈತರ ಸಮಸ್ಯೆ ಬಗ್ಗೆ ಮಾತನಾಡಲು ಅವಕಾಶ ಬೇಕು. ಸಂಬಂಧಪಟ್ಟ ಸಚಿವರೂ ಇರಬೇಕು ಎಂದು ಬೇಡಿಕೆ ಸಲ್ಲಿಸಿದರು.
ಇದನ್ನೂ ಓದಿ: Video: ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು!
'ಸಿಎಂ ರೈತರನ್ನು ಸಂಪರ್ಕಿಸುತ್ತಾರೆ'
ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದು, ಮನವಿ ಸ್ವೀಕರಿಸಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಿಎಂ ಬರುವುದು ತಡವಾಗಲಿದೆ. ಗುಜರಾತ್ ನಿಂದ ಬಂದ ತಕ್ಷಣ ರೈತರನ್ನು ಸಂಪರ್ಕಿಸುತ್ತೇನೆ ಎಂದಿದ್ದಾರೆ. ಶಾಸಕಾಂಗ ಸಭೆ ಕೂಡಾ ಇರುವುದರಿಂದ ಇಂದು ಸಾಧ್ಯವಿಲ್ಲ. ನಂತರ ಫೋನ್ ಮೂಲಕ ಕೋಡಿಹಳ್ಳಿ ಅವರನ್ನು ಸಂಪರ್ಕಿಸಲಿದ್ದಾರೆ. ನಾನು ರೈತರು ಹಾಗೂ ಸಿಎಂ ಮಧ್ಯೆ ಕೋಆರ್ಡಿನೇಟರ್ ಆಗಿ ಚರ್ಚೆಗೆ ಸಮಯ ನಿಗದಿ ಮಾಡುತ್ತೇನೆ ಎಂದರು.
ಬಳಿಕ ಪ್ರತಿಕ್ರಿಯೆ ನೀಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಇವತ್ತಿನ ಚಳವಳಿಯನ್ನು ಹಿಂಪಡೆದಿದ್ದೇವೆ. ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ಆದರೆ ಕೃಷಿಕಾಯ್ದೆ ವಾಪಾಸು ಆಗುವವರೆಗೂ ಹೋರಾಟ ಮುಂದುವರೆಯುತ್ತದೆ. ಇದೇ 27ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ. ರಾಜ್ಯದ ಎಲ್ಲಾ ರೈತ ಚಳುವಳಿ, ಕಾರ್ಮಿಕ, ಆಟೋ, ಬಸ್, ಚಾಲಕರು, ಮಹಿಳಾ ಸಂಘಟನೆಗಳನ್ನು ಒಳಗೊಂಡಂತೆ ಈ ಬಂದ್‌ಗೆ ಕರೆ ನೀಡಲಾಗಿದೆ. ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದಿದಾರೆ. ಮತ್ತೆ ಸೆ.15 ಕ್ಕೆ ಈ ಸಭೆ ನಡೆಸಲಾಗುವುದು ಎಂದು ಹೇಳಿದರು.
ಇನ್ನು ಪ್ರತಿಭಟನೆಗೆ ಬಂದು ಕೃಷಿ ಸಚಿವರು ಮನವಿ ಸ್ವೀಕರಿಸಲು ಹಿಂದೇಟು ಹಾಕಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಕೃಷಿವಲಯಕ್ಕೆ ಸರ್ಕಾರ ದೊಡ್ಡಪ್ರಮಾದ ಆಗಿದೆ ಎಂದರು. ಈ ಹಿಂದೆ ಕೃಷಿಸಚಿವರಿಗೂ ನಮಗೂ ಅನೇಕ ಸಂಘರ್ಷ ಆಗಿವೆ. ಆದರೂ ನಾವು ಅವರನ್ನು ಮಂತ್ರಿಯಾಗಿಯೇ ನೋಡುತ್ತೇವೆ. ಅವರೂ ನಮ್ಮನ್ನು ರೈತರಾಗಿ ನೋಡಿ ಸಮಸ್ಯೆ ಪರಿಹರಿಸಬೇಕು ಎಂದರು.