ಬೆಂಗಳೂರು: ನಗರದ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಿರುವ `ಅಂಬೇಡ್ಕರ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ'ದ ನೂತನ ಕ್ಯಾಂಪಸ್ ಗೆ ಭೇಟಿ ನೀಡಿದ್ದ ಸಚಿವರಾದ ಸೋಮಣ್ಣ ಹಾಗೂ ಮುನಿರತ್ನ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲು ಪೂರಕವಾಗಿ ಅಧಿಕಾರಿಗಳ ಜೊತೆ ಚರ್ಚಿಸಿ ಜಲಮಂಡಳಿ, ಬೆಸ್ಕಾಂ, ಬಿಬಿಎಂಪಿ ಕಮೀಷನರ್ ಗೌರವ್ ಗುಪ್ತಾಗೆ ಸಲಹೆ ಸೂಚನೆ ನೀಡಲಾಯಿತು.
ನಂತರ ಮಾತನಾಡಿದ ಸಚಿವ ಸೋಮಣ್ಣ, ಡಿ.6 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. ಪ್ರಧಾನಿ ಬರುವ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕಾರ್ಯಕ್ರಮದ ಜವಾಬ್ದಾರಿಯನ್ನು ಸಚಿವರಾದ ಅಶ್ವತ್ಥ್ ನಾರಾಯಣ್, ಮುನಿರತ್ನ ಹಾಗೂ ನನಗೆ ವಹಿಸಿದ್ದಾರೆ. ಬಿಬಿಎಂಪಿ ಕಮಿಷನರ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ. ಪ್ರಧಾನಿ ಬರುವುದರಿಂದ ಸಿಎಂ ಬೊಮ್ಮಾಯಿ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಎಂದರು.
ಬೆಂಗಳೂರಲ್ಲಿ ಮಳೆ ಹಾನಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಈ ಬಾರಿಯ ಮಳೆ ಭಾರಿ ಹಾನಿ ಮಾಡಿದೆ. ರಾಜ್ಯ ಮಾತ್ರವಲ್ಲದೇ, ದೇಶದಲ್ಲಿಯೂ ಎಂದೂ ಇಷ್ಟೊಂದು ಮಳೆಯಾಗಿರಲಿಲ್ಲ. ಬೆಂಗಳೂರು ನಗರದ ಹೊರಗಡೆ ವರುಣನ ಆರ್ಭಟದಿಂದ ಕೆಲವೊಂದು ಅನಾಹುತಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.
ಯಲಹಂಕ ಸೇರಿದಂತೆ ಕೆಲಭಾಗದಲ್ಲಿ ಮಳೆ ಭಾರಿ ಸಮಸ್ಯೆ ಉಂಟು ಮಾಡಿದೆ. ಅಧಿಕಾರಿಗಳು, ಬೆಸ್ಕಾಂ, ಜಲಮಂಡಳಿ ಸಿಬ್ಬಂದಿ ಚುರುಕಿನ ಕಾರ್ಯ ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಇಂದು 12 ಗಂಟೆಗೆ ಸಭೆ ಕರೆದಿದ್ದಾರೆ. ಮಳೆ ಹಾನಿ ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.