ಬೆಂಗಳೂರು : ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ತೆಗೆದುಕೊಂಡಿರುವ ನಿರ್ಣಯವನ್ನು ಖಂಡಿಸುತ್ತೇನೆ. ಈ ತರದ ಗೊಡ್ಡು ಬೆದರಿಕೆಗೆ ಕರ್ನಾಟಕ ಬಗ್ಗಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗೆ ಯಾರೂ ತಡೆ ಮಾಡಬಾರದು ಎಂಬ ಕಾನೂನು ಇದೆ. ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿದೆ. ರಾಜಕೀಯ ಲಾಭಕ್ಕಾಗಿ ಸದಾ ಕರ್ನಾಟಕದ ಮೇಲೆ ಕಿಡಿ ಕಾರುವ ಪ್ರವೃತ್ತಿ ತಮಿಳುನಾಡಿನ ಸರ್ಕಾರದ್ದಾಗಿದೆ.
ಯಾವುದೇ ಸರ್ಕಾರ ಇದ್ದರೂ ಇದೇ ಪ್ರವೃತ್ತಿ ಇದೆ. ಹಿಂದೆ ಜಯಲಲಿತಾ ಇದ್ದಾಗಲೂ ಇದೇ ಕಾಟ, ಈಗ ಸ್ಟಾಲಿನ್ ಬಂದಾಗಲೂ ಇದೇ ಕಾಟ ಮುಂದುವರಿದಿದೆ ಎಂದು ಕಿಡಿಕಾರಿದರು. ಇದರಿಂದ ಮತ ಬ್ಯಾಂಕ್ ಮಾಡುವ ವ್ಯವಸ್ಥೆಯನ್ನು ನಿರಂತರವಾಗಿ ತಮಿಳುನಾಡು ಪಕ್ಷಗಳು ಮಾಡುತ್ತಿವೆ.
ಕರ್ನಾಟಕವನ್ನು ವಿರೋಧ ಮಾಡಿದರೆ ವೋಟ್ ಬರುತ್ತೆ ಎಂಬುದು ಅವರ ಮನೋಭಾವನೆ. ಆದರೆ, ಮೇಕೆದಾಟು ಯೋಜನೇ ಆಗಲೇಬೇಕು. ಸಿಎಂ ಕೂಡ ಯೋಜನೆ ಅನುಷ್ಠಾನ ಸಂಬಂಧ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾವಂತೂ ಯೋಜನೆ ಅನುಷ್ಠಾನಕ್ಕೆ ಅಚಲರಾಗಿದ್ದೇವೆ ಎಂದರು.
ಇದನ್ನೂ ಓದಿ: ಭಗವದ್ಗೀತೆ, ಭಾಷೆ, ದೇಶ, ಧರ್ಮ ಬೇಕಾಗಿದೆ, ಅದರ ಬಗ್ಗೆ ಮಾತಾಡಿದ್ರೆ ಪ್ರಚಾರ ಸಿಗುತ್ತೆ : ಜನರ ಮನಸ್ಥಿತಿಗೆ ಹೆಚ್ಡಿಕೆ ಅಸಮಾಧಾನ