ಬೆಂಗಳೂರು: ಬಿಜೆಪಿಯ ಕೆಲ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಯಮ್ಮ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಆರ್. ಅಶೋಕ್ ನಮ್ಮೊಂದಿಗೂ ಕೆಲ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಓರ್ವ ಪಕ್ಷಾಂತರಿ. ಹೀಗಾಗಿ ಅವರು ಪಕ್ಷಾಂತರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ಶಾಸಕರನ್ನು ಸೂರ್ಯ ಚಂದ್ರ ಇರುವವರೆಗೂ ಮತ್ತೆ ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೀಗ, ಅವರು ಬರುವುದಕ್ಕೆ ಅಡ್ಡಿಯಿಲ್ಲ ಎನ್ನುತ್ತಾರೆ. ಕಾಂಗ್ರೆಸ್ಗೆ ಗೆಲ್ಲುವ ಶಕ್ತಿ ಇಲ್ಲ. ಅದಕ್ಕಾಗಿ ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಅಲ್ಲದೇ, ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲೂ ಇದ್ದಾರೆ. ಅವರ ಬಳಿ ಒಂದು ಬಾರಿ ಹೋದರೆ ನಮ್ಮ ಬಳಿ ಹತ್ತು ಬಾರಿ ಬರುತ್ತಾರೆ. ಹಾಗೆಯೇ, ಸಿದ್ದರಾಮಯ್ಯ ಪಕ್ಷಕ್ಕೆ ಬರುವವರ ಹೆಸರು ಹೇಳಿದ ಮೇಲೆ ತಾವೂ ಹೆಸರು ಪ್ರಕಟಿಸುವುದಾಗಿ ಅಶೋಕ್ ತಿಳಿಸಿದರು. ಪಾದಯಾತ್ರೆ ನಿಂತು ಹೋಗಿದ್ದಕ್ಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಇವರಿಗೆ ನದಿಗಳು ನೆನಪಾಗುತ್ತವೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಹುದ್ದೆಯಿಂದ ಬಸವರಾಜ ಬೊಮ್ಮಾಯಿ ತೆರವು ಮಾಡಲಾಗುತ್ತದೆ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿದ ಆರ್. ಅಶೋಕ್, ಸಿಎಂ ಹುದ್ದೆ ಬದಲಾವಣೆ ವಿಚಾರವೇ ಬಿಜೆಪಿಯಲ್ಲಿಲ್ಲ. ಕೇಂದ್ರ ನಾಯಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಸಂಪರ್ಕದಲ್ಲಿದ್ದೇನೆ. ಸಿಎಂ ಬದಲಾವಣೆ ಎಂಬುದು ಕೇವಲ ವದಂತಿ. ಬಸವರಾಜ ಬೊಮ್ಮಾಯಿ ಅವರೇ ಪೂರ್ಣಾವಧಿವರೆಗೂ ಸಿಎಂ ಆಗಲಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಚುನಾವಣೆಯನ್ನು ಸಹ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ: ನಾವು ಯಾರೂ ಬಿಜೆಪಿ ಪಕ್ಷ ಬಿಟ್ಟು ಹೋಗುವುದಿಲ್ಲ: ಶಾಸಕ ಮಹೇಶ್ ಕುಮಟಳ್ಳಿ
ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸಚಿವ ಅಶೋಕ್, ಈ ಕುರಿತು ಸಿಎಂ ನನ್ನ ಜೊತೆ ಚರ್ಚೆ ನಡೆಸಿಯೇ ನಿರ್ಣಯ ಮಾಡಿದ್ದಾರೆ. ಉಸ್ತುವಾರಿ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬೇಡ ಎಂದಿದ್ದೆ ಎಂದು ತಿಳಿಸಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ