ಬೆಂಗಳೂರು : ಹೋಟೆಲ್ಗಳ ಮುಂದೆ ಟುಡೇ ಸ್ಪೆಷಲ್ ಎಂದು ಬೋರ್ಡ್ ಇದ್ದ ಹಾಗೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದಿನಕ್ಕೊಂದು ಸ್ಪೆಷಲ್ ಮಾಡ್ತಿರ್ತಾರೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಎಲ್ಲ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡಬೇಕು ಎಂಬುದು ಚಟ. ಸರ್ಕಾರ ಏನು ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ. ಅವರಿಗೆ ನಾನು ಮಾಡಿದ್ದೇ ಸರಿ ಎಂಬ ಭಾವನೆ ಇದೆ. ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ ಎಂಬ ಅಹಂ ಅವರಿಗಿದೆ ಎಂದು ಜರಿದರು.
ಕಾಂಗ್ರೆಸ್ ನಾಯಕರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ. ಸಿಕ್ಕ ಆರೇ ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ 5 ವರ್ಷ ಆಡಳಿತ ನಡೆಸಲು ಅವಕಾಶ ಸಿಕ್ಕಿತ್ತು.
ಆ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಹಾಗಾಗಿ, ಜನ ಕಾಂಗ್ರೆಸ್ ತಿರಸ್ಕರಿಸಿದರು. ಆದ್ದರಿಂದ 78 ಸ್ಥಾನಕ್ಕೆ ಕಾಂಗ್ರೆಸ್ ಕುಸಿಯಿತು. ಕಾಂಗ್ರೆಸ್ ದುರಾಡಳಿತ ತಾಳದೇ ಅವರದೇ ಪಕ್ಷದ 17 ಜನರು ಪಕ್ಷ ಬಿಟ್ಟು ಬಂದಿಲ್ಲವೇ ಎಂದು ಕಿಚಾಯಿಸಿದರು.
ಓದಿ: ಕಾಂಗ್ರೆಸ್ ಪಕ್ಷ ಅನ್ನೋದು ಕಿರಿಕ್ ಪಾರ್ಟಿ ಇದ್ದಂಗೆ: ಸಚಿವ ಶ್ರೀರಾಮುಲು ವ್ಯಂಗ್ಯ
ಕಾಂಗ್ರೆಸ್ ಇದರ ಬಗ್ಗೆ ಸತ್ಯ ಶೋಧನಾ ಸಮಿತಿ ಮಾಡಬೇಕಿತ್ತು. ಅಷ್ಟು ಜನರ ಶಾಸಕರು ಏಕೆ ಪಕ್ಷ ಬಿಟ್ಟು ಹೋದರು ಎಂಬ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಹಿರಿಯ ಮುಖಂಡ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ. ಸದ್ಯ ಸಿದ್ದರಾಮಯ್ಯ, ಡಿಕೆಶಿ ಅವರ ಶೋ ನಡೆಯುತ್ತಿದೆ. ಅವರಿಬ್ಬರ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನ ಏನೂ ಇಲ್ಲ. ಮಾಧ್ಯಮಗಳು ಬರೆದಿರೋದೆ ಬೇರೆ. ಅಲ್ಲಿ ನಡೆದಿದ್ದೇ ಬೇರೆ. ಎಲ್ಲರೂ ಸೇರಿ ಬೆಳಗಾವಿ ಮೇಯರ್ ಚುನಾವಣೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ