ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ತಿಂಗಳು ಕೋವಿಡ್ನ ಅಟ್ಟಹಾಸ ಜೋರಾಗಿರಲಿದೆ. ಮೇ ಅಂತ್ಯದವರೆಗೆ ಕೋವಿಡ್ ಸ್ಫೋಟವಾಗಲಿದ್ದು, ಜನರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ 15 ಲಕ್ಷಕ್ಕೂ ಹೆಚ್ಚು ಲಸಿಕೆ ಕಳಿಸಿದ್ದಾರೆ. 10 ಲಕ್ಷ ಬೆಂಗಳೂರಿಗೆ, 5 ಲಕ್ಷ ಬೆಳಗಾವಿಗೆ ಕಳಿಸಿದ್ದಾರೆ. ಬೆಂಗಳೂರಿನಲ್ಲಿ ಸ್ವಲ್ಪ ಸೋಂಕು ಕಡಿಮೆಯಾಗಿದೆ. ನಿನ್ನೆ ಪ್ರಧಾನಿ ಕೂಡ ಎಂಟು ರಾಜ್ಯಗಳ ಜೊತೆ ಸಮಾಲೋಚನೆ ಮಾಡಿದ್ದು, ಆಯಾ ರಾಜ್ಯಸರ್ಕಾರಗಳಿಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನೀಡಿದ್ದಾರೆ. ಸೋಂಕು ಜಾಸ್ತಿಯಾದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಸೂಚಿಸಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಏನ್ ಮಾಡಿದ್ದಾರೆ ಅಂತ ನೋಡಿದ್ದೇವೆ. ಹೀಗಾಗಿ, ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ನಲ್ಲಿ ಬೆಡ್ಗಳನ್ನು ಹೆಚ್ಚು ಮಾಡಬೇಕು. ಇನ್ನು ಬೆಡ್ಗಳು ಪೂರ್ಣವಾಗಿಲ್ಲ, ಖಾಸಗಿ ಆಸ್ಪತ್ರೆಯೊಂದಿಗೂ ಶೇ. 20ರಷ್ಟು ಮೀಸಲಿಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಚಿತ್ರಮಂದಿರಗಳಿಗೆ ಶೇ.100ರಷ್ಟು ಪ್ರೇಕ್ಷಕರಿಗೆ ಮುಖ್ಯಮಂತ್ರಿಗಳು ಅವಕಾಶ ನೀಡಿದ್ದಾರೆ. ಸಿನಿಮಾ ಟಿಕೆಟ್ ಅಡ್ವಾನ್ಸ್ ಬುಕ್ ಆಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಮಾನವೀಯ ದೃಷ್ಟಿಯಿಂದ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿನಿಮಾದವರು ಸಹ ಸಹಕಾರ ಕೇಳಿದ್ದು, ಮುಖ್ಯಮಂತ್ರಿಗಳಿಗೂ ಸಾಕಷ್ಟು ಒತ್ತಡಗಳಿರುತ್ತವೆ. ಜನರು ಸಹಕಾರ ನೀಡಬೇಕು. ಕೋವಿಡ್ ಹೆಚ್ಚಾದಾಗ ಸರ್ಕಾರಕ್ಕೆ ಬೇರೆ ದಾರಿ ಇರೋದಿಲ್ಲ. ಹಂತ-ಹಂತವಾಗಿ ಒಂದೊಂದು ಚಟುವಟಿಕೆ ನಿಲ್ಲಿಸಬೇಕಾಗುತ್ತದೆ ಎಂದರು.
ರಮೇಶ್ ಜಾರಕಿಹೊಳಿ ಪ್ರಕರಣ ಏನಾಗಿದೆ ಗಮನಿಸಿಲ್ಲ:
ನಾನು ಜನರ ಆರೋಗ್ಯ, ನನ್ನ ಕಾರ್ಯದಲ್ಲಿ ಬ್ಯುಸಿ ಇದ್ದೇನೆ. ಕೋವಿಡ್ ಕಂಟ್ರೋಲ್ಗೆ ಶ್ರಮ ವಹಿಸುತ್ತಿದ್ದೇನೆ. ಅದಕ್ಕೆ ಸಮಯ ಸಿಗುತ್ತಿಲ್ಲ. ರಮೇಶ್ ಜಾರಕಿಹೊಳಿ ಪ್ರಕರಣ ಏನಾಗಿದೆ ಗಮನಿಸಿಲ್ಲ ಎಂದರು.
ಇದನ್ನೂ ಓದಿ: ಡಿನೋಟಿಫಿಕೇಷನ್: ಸಿಎಂ ಬಿಎಸ್ವೈಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್