ಬೆಂಗಳೂರು: ನರೇಗಾ ಯೋಜನೆಯಡಿ 2021-22ನೇ ಸಾಲಿನಲ್ಲಿ ನೀಡಿದ್ದ 13 ಕೋಟಿ ಮಾನವ ದಿನ ಗುರಿ ಮೀರಿ ಇಲ್ಲಿಯವರೆಗೆ 13.14 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಸರ್ಕಾರದ ಬೇಡಿಕೆ ಪರಿಗಣಿಸಿ ಈ ಸಾಲಿಗೆ 1.40 ಕೋಟಿ ಉದ್ಯೋಗ ಸೃಜನೆಗೆ ಕೇಂದ್ರ ಅವಕಾಶ ಕಲ್ಪಿಸಿದೆ. ಇದರಿಂದ ರಾಜ್ಯಕ್ಕೆ ಹೆಚ್ಚುವರಿ 715 ಕೋಟಿ ಅನುದಾನ ಲಭ್ಯವಾಗಲಿದೆ. ಈ ವರ್ಷ 10.68 ಲಕ್ಷ ಜನರು ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಜಲಶಕ್ತಿ ಅಭಿಯಾನದಲ್ಲಿ ರಾಜ್ಯ 4.87 ಲಕ್ಷ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಾಮನಗರ, ತುಮಕೂರು, ಬೆಳಗಾವಿ, ಚಿತ್ರದುರ್ಗ, ಕಲಬುರಗಿ ಮತ್ತು ಕೊಪ್ಪಳ ಜಲಶಕ್ತಿ ಅಭಿಯಾನದಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿವೆ ಎಂದು ವಿವರಿಸಿದರು.
ಸ್ವಚ್ಛ ಭಾರತ ಮಿಷನ್ ಬಗ್ಗೆ ಈಶ್ವರಪ್ಪ ಮಾತು
ಭಾರತ್ ಮಿಷನ್ ಬಗ್ಗೆ ಮಾತನಾಡಿದ ಅವರು, 2019-20 ಸಾಲಿನಿಂದ 2020-21ನೇ ಸಾಲಿಗೆ ಬೇಸ್ಲೈನ್ ಸರ್ವೆ-2012ರ ಪ್ರಕಾರ ಶೌಚಾಲಯ ರಹಿತ ಕುಟುಂಬಗಳಿಗೆ 4.39 ಲಕ್ಷ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು, ಶೌಚಾಲಯಗಳ ಪ್ರಗತಿಯು ಪೂರ್ಣಗೊಂಡಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,30,095 ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದು, ಈವರೆಗೆ 76,081 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
2019-20 ಸಾಲಿನಿಂದ 2020-21ನೇ ಸಾಲಿಗೆ 756 ಸಮುದಾಯ/ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ 682 ಸಮುದಾಯ / ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ 200 ಸಮುದಾಯ/ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ 231 ಸಮುದಾಯ / ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
7003 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಗುರಿ: 5965 ಗ್ರಾಮ ಪಂಚಾಯತಿಗಳ ಪೈಕಿ ಘನ ತ್ಯಾಜ್ಯ ನಿರ್ವಹಣೆಗೆ ಜಾಗ ಲಭ್ಯವಿರುವಂತಹ 5616 ಗ್ರಾಮ ಪಂಚಾಯಿತಿಗಳಲ್ಲಿ ವಿಸ್ತೃತ ಯೋಜನಾ ವರದಿಗಳಿಗೆ ಅನುಮೋದನೆ ನೀಡಲಾಗಿದ್ದು, ಪ್ರಸ್ತುತ 3585 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯಾಚರಣೆಯಲ್ಲಿದ್ದು, ಶೀಘ್ರದಲ್ಲಿಯೇ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 7003 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಮಾಡಲು ಗುರಿ ಹೊಂದಲಾಗಿದ್ದು, ಈವರೆಗೆ 4365 ಗ್ರಾಮಗಳಲ್ಲಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಸುಸ್ಥಿರತೆ ಕಾಯ್ದುಕೊಳ್ಳಲು ಮಲ ತ್ಯಾಜ್ಯ ನಿರ್ವಹಣಾ ಘಟಕಗಳ ಮೂಲಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ನಿರ್ವಹಿಸಲು 17 ಮಾದರಿ ಘಟಕಗಳನ್ನು ಪ್ರಾರಂಭಿಸಲು ಗುರಿ ಹೊಂದಲಾಗಿದ್ದು, 17 ಘಟಕಗಳಿಗೆ ವಿಸ್ತೃತ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದ್ದು, ಸ್ಥಳ ಲಭ್ಯವಿರುವಂತಹ ಗ್ರಾಮ ಪಂಚಾಯತಿಗಳಲ್ಲಿ ಘಟಕಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಎರಡು ಘಟಕಗಳು ಪೂರ್ಣಗೊಂಡಿರುತ್ತದೆ.
ಗ್ರಾಮ ಪಂಚಾಯತಿಗಳಲ್ಲಿ ಸಂಗ್ರಹಿಸಲಾಗುತ್ತಿರುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೃಹತ್ ಮಟ್ಟದಲ್ಲಿ ನಾಲ್ಕು ಮಾದರಿ ಘಟಕಗಳನ್ನು ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, 04 (ರಾಮನಗರ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ) ಘಟಕಗಳಿಗೆ ವಿಸ್ತೃತ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದ್ದು, ಸ್ಥಳ ಲಭ್ಯವಿರುವಂತಹ ಗ್ರಾಮ ಪಂಚಾಯತಿಗಳಲ್ಲಿ ಘಟಕಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಘಟಕ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.
ದೇಶದಲ್ಲೇ ಮೊದಲ ನೈರ್ಮಲ್ಯ ಕಾರ್ಯತಂತ್ರ: ಹಸಿ ತ್ಯಾಜ್ಯದಿಂದ ಗೋಬರ್ ಅನಿಲವನ್ನು ತಯಾರಿಸುವ ಉದ್ದೇಶದಿಂದ ಪ್ರಸ್ತುತ 12 ಘಟಕಗಳಿಗೆ ವಿಸ್ತೃತ ಯೋಜನಾ ವರದಿಗಳಿಗೆ ಅನುಮೋದನೆ ನೀಡಲಾಗಿದ್ದು, 05 ಘಟಕಗಳು ಪೂರ್ಣಗೊಂಡಿದ್ದು, ಬಾಕಿ ಘಟಕಗಳ ಕಾಮಗಾರಿಗಳು ಕಾರ್ಯಹಂತದಲ್ಲಿರುತ್ತವೆ. ಯೋಜನೆಯ ಮಾರ್ಗಸೂಚಿಯಂತೆ ಗ್ರಾಮಗಳನ್ನು 3 ಹಂತದಲ್ಲಿ ಮಾಡಲು ತಿಳಿಸಲಾಗಿದ್ದು, ಅದರಂತೆ ಪ್ರಸ್ತುತ ವೈಯಕ್ತಿಕ ಗೃಹ ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕಾರ್ಯಾಚರಣೆಯಲ್ಲಿರುವಂತಹ ಗ್ರಾಮಗಳ ಪೈಕಿ ಪ್ರಸ್ತುತ 1422 ಗ್ರಾಮಗಳನ್ನು ಘೋಷಿಸಲಾಗಿದೆ.
ನೈರ್ಮಲ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮಾಧ್ಯಮ ಸಂವಹನದ ಮೂಲಕ ಉತ್ತಮವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಪ್ರಸಕ್ತ ಸಾಲಿನಲ್ಲಿ ISC-FICCI-Best Digital Communication in Sanitation ಪ್ರಶಸ್ತಿಯನ್ನು ಪಡೆಯಲಾಗಿದೆ. ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯವು ಗ್ರಾಮೀಣ ನೈರ್ಮಲ್ಯ ನೀತಿ ಕಾರ್ಯತಂತ್ರ ಮತ್ತು ಮಾದರಿ ಉಪ ವಿಧಿಗಳು ಅನುಷ್ಠಾನ ಮಾಡಲಾಗಿದೆ ಎಂದರು.
ಜಲ ಜೀವನ್ ಮಿಷನ್ ಬಗ್ಗೆ ಈಶ್ವರಪ್ಪ ಮಾತು
ಕೇಂದ್ರ ಸರ್ಕಾರವು 2019ರ ಆ.15 ರಂದು ಜಲಜೀವನ್ ಮಿಷನ್ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕವನ್ನು 2024 ನೇ ಸಾಲಿನೊಳಗೆ ಒದಗಿಸಲು ಉದ್ದೇಶಿಸಲಾಗಿದೆ ಹಾಗೂ ಸದರಿ ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಡಿಸೆಂಬರ್-2019ರಲ್ಲಿ ಹೊರಡಿಸಲಾಗಿರುತ್ತದೆ.
ರಾಜ್ಯದಲ್ಲಿ ಈ ಯೋಜನೆಯನ್ನು 'ಮನೆ ಮನೆಗೆ ಗಂಗೆ' ಎಂಬ ಯೋಜನೆ ಮೂಲಕ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಒಟ್ಟು 97.91 ಗ್ರಾಮೀಣ ಮನೆಗಳಿದ್ದು, ಈ ಪೈಕಿ ಈವರೆಗೆ 42.66 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕವನ್ನು ಒದಗಿಸಲಾಗಿದೆ.
ಎಲ್ಲಾ ಗ್ರಾಮೀಣ ಮನೆಗಳಿಗೆ ನಳ ನೀರು: ಪ್ರಸ್ತುತ 2021-22ನೇ ಸಾಲಿಗೆ 25.17 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ ಹಾಗೂ 120 ಹೊಸ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ರೂಪಿಸಲಾಗಿದೆ. ಸದರಿ ಯೋಜನೆಗಳ ಅನುಷ್ಟಾನಕ್ಕಾಗಿ ರೂ.8196.96 ಕೋಟಿಗಳಿಗೆ ರಾಜ್ಯ ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಕೇಂದ್ರ ಸರ್ಕಾರದಿಂದ ಅನುಮೋದನೆಯನ್ನು ಪಡೆಯಲಾಗಿದೆ. ಮುಂದುವರೆದು 2022-23 ಹಾಗೂ 2023-24ನೇ ಸಾಲಿಗೆ ಕ್ರಮವಾಗಿ 27.14 ಲಕ್ಷ ಮತ್ತು 17.45 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಿ, ರಾಜ್ಯದಲ್ಲಿನ ಎಲ್ಲಾ ಗ್ರಾಮೀಣ ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಒದಗಿಸಲು ಯೋಜಿಸಲಾಗಿದೆ.
ನಬಾರ್ಡ್ ಸಂಸ್ಥೆಯ ಕಾರ್ಯಕ್ರಮದಡಿ ಚಿತ್ರದುರ್ಗ, ಉಡುಪಿ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ರೂ. 3,648.65 ಕೋಟಿಗಳ ಅಂದಾಜು ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳಿಂದ 3081 ಗ್ರಾಮೀಣ ಜನವಸತಿಗಳಲ್ಲಿನ ಸುಮಾರು 26.57ಲಕ್ಷಗಳ ಜನಸಂಖ್ಯೆಗೆ ಹಾಗೂ 5,62,061 ಮನೆಗಳಿಗೆ 55 ಎಲ್ಪಿಸಿಡಿಯಂಥಹ ಶುದ್ಧ ಕುಡಿಯುವ ನೀರನ್ನು ಕಾರ್ಯಾತ್ಮಕ ನಳ ಸಂಪರ್ಕದ ಮುಖಾಂತರ ಒದಗಿಸಲು ಯೋಜಿಸಲಾಗಿದೆ. ಸದರಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಮೌಲ್ಯಮಾಪನ ಹಂತದಲ್ಲಿರುತ್ತದೆ ಎಂದರು.
78 ನೀರು ಪ್ರಯೋಗಾಲಯಗಳ ಸ್ಥಾಪನೆ: ಗ್ರಾಮೀಣ ಪ್ರದೇಶಗಳ ಶುದ್ಧ-ಸುರಕ್ಷಿತ ನೀರನ್ನು ಒದಗಿಸುವ ಸಲುವಾಗಿ ನೀರಿನ ಗುಣಮಟ್ಟತೆ ಪರೀಕ್ಷೆ ನಡೆಸಲು ರಾಜ್ಯದ 31 ಜಿಲ್ಲೆಗಳಲ್ಲಿ 78 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 13 ಜಿಲ್ಲಾ ಮಟ್ಟದ ಪ್ರಯೋಗಾಲಯಗಳಿಗೆ ಎನ್ಎಬಿಎಲ್ ಮಾನ್ಯತೆ ಪಡೆದಿದ್ದು, ಈ ಪ್ರಯೋಗಾಲಯಗಳು ನೀರಿನ ಗುಣಮಟ್ಟತೆ ಪರೀಕ್ಷೆ ನಡೆಸುವಲ್ಲಿ ಕಾರ್ಯಾಚರಣೆಯಲ್ಲಿವೆ. ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಕುಡಿಯುವ ನೀರು ವಿಭಾಗಗಳಲ್ಲಿ 32 ಅನುಷ್ಠಾನ ನೆರವು ಸಂಸ್ಥೆಗಳನ್ನು ನೊಂದಾಯಿಸಿಕೊಂಡು ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ನೀರು ಮತ್ತು ನೈರ್ಮಲ್ಯ ಕುಂದುಕೊರತೆಗಳ ಸಮಸ್ಯೆಗಳನ್ನು ಶೀಘ್ರ ಸಮಯದಲ್ಲಿ ಪರಿಹರಿಸಲು ಇಲಾಖೆಯಡಿ ‘ಪರಿಹಾರ-ಸಹಾಯವಾಣಿ (9480985555) ಸ್ಥಾಪಿಸಲಾಗಿದೆ. ಗ್ರಾಮೀಣ ಜನರಿಗೆ ಇಲಾಖೆಯ ಕಾರ್ಯಕ್ರಮಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಸಾಕ್ಷ್ಯಚಿತ್ರ ಪ್ರಸಾರ, ಸಮುದಾಯ ರೇಡಿಯೋ ಸೇವೆ, ದೂರದರ್ಶನ, ರೈಲು-ಬಸ್ ಬ್ರ್ಯಾಂಡಿಂಗ್ ಮುದ್ರಣ ಸಾಮಾಗ್ರಗಿಗಳು(ಕೈಪಿಡಿಗಳು, ಕರಪತ್ರಗಳು & ಭಿತ್ತಿಚಿತ್ರಗಳು) ಮುಂತಾದ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೆಲುಗೈ.. 'Well done' ಎಂದ ರಾಹುಲ್ ಗಾಂಧಿ!