ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ಸಂಬಂಧ ತನಿಖೆಯಾಗುತ್ತಿದೆ. ತನಿಖೆ ಬಳಿಕ ಯಾರಿದ್ದಾರೆ ಅನ್ನೋದು ಗೊತ್ತಾಗಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿಗಳಿದ್ದಾರೆ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ಈ ಬಗ್ಗೆ ನಾನೇನು ಹೇಳಲ್ಲ. ಇದರಲ್ಲಿ ಕಾಂಗ್ರೆಸ್ನವರು ಇದ್ದಾರಾ?, ಜೆಡಿಎಸ್ ನವರು ಇದ್ದಾರಾ?. ಸಿಎಂ ಮಗ ಇದ್ದಾರಾ?, ಸಚಿವರ ಮಗನಿದ್ದಾರಾ? ಇದೆಲ್ಲ ಸಾರ್ವಜನಿಕ ಚರ್ಚೆಯಾದರೆ ನಾನ್ಯಾಕೆ ಉತ್ತರಿಸಲಿ?. ಯಾರಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಅವರಿದ್ದಾರೆ, ಇವರಿದ್ದಾರೆ ಎಂದು ಹೇಳುವುದು ಸರಿಯಲ್ಲ. ಊಹೆಗಳ ಮೇಲೆ ಮಾತನಾಡುವುದು ಬೇಡ. ಸಿಎಂ ಮಗ ಇದ್ದಾರೆ ಎನ್ನುವುದು ಗೊತ್ತಿದೆಯಾ?. ಸಾರ್ವಜನಿಕವಾಗಿ ಇದು ಬೇರೆ ರೀತಿಯ ಸಂದೇಶ ರವಾನಿಸುತ್ತದೆ. ಆ ರೀತಿ ಊಹಾಪೋಹದ ಮಾತು ಸರಿಯಲ್ಲ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿದೆ ಎಂದರು.
'ಕತ್ತಲಲ್ಲಿ ಕರಿ ಬೆಕ್ಕು ಹುಡುಕಿದ ಹಾಗೆ'
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆ ಮಾಡ್ತಾರೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು 'ಕತ್ತಲಲ್ಲಿ ಕರಿ ಬೆಕ್ಕು ಹುಡುಕಿದ ಹಾಗೆ'. ಆದರೆ ಕತ್ತಲಲ್ಲಿ ಬೆಕ್ಕು ಕೂಡ ಇಲ್ಲ. ಸುಮ್ಮನೇ ಆ ರೀತಿಯೆಲ್ಲ ಹೇಳಬಾರದು. ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲ್ ಬದಲಾವಣೆ ಇಲ್ಲ. ಅವರು ರಾಜ್ಯಾದ್ಯಂತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಚುನಾವಣೆಗಳನ್ನ ಗೆಲ್ಲುತ್ತಾ ಬಂದಿದ್ದೇವೆ. ಸಂಘಟನೆ ಚೆನ್ನಾಗಿ ಮಾಡುತ್ತಿದ್ದಾರೆ. ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ಮಾಡೇ ಮಾಡ್ತಿವಿ:
ಮೇಕೆದಾಟು ಸಂಬಂಧ ಕಾಂಗ್ರೆಸ್ ಹೋರಾಟ ಬಗ್ಗೆ ಮಾತನಾಡಿದ ಈಶ್ವರಪ್ಪ, ಮೇಕೆದಾಟು ಯೋಜನೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬರ ಅಪೇಕ್ಷೆ. ಕಾನೂನು ಬದ್ಧವಾಗಿ ಮಾಡಲೇಬೇಕು ಎಂದು ತೀರ್ಮಾನಿಸಿದ್ದೇವೆ. ಕಾಂಗ್ರೆಸ್ನವರಿಗೆ ಈಗ್ಯಾಕೆ ನೆನಪಿಗೆ ಬಂತು?. ಅವರ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ?. ನಾವೇನು ಮಾಡಲ್ಲ ಎಂದು ಹೇಳಲಿಲ್ಲವಲ್ಲ. ಅವರು ಪಾದಯಾತ್ರೆ ಮಾಡ್ಲಿ ಬಿಡ್ಲಿ. ನಾವಂತೂ ಮೇಕೆದಾಟು ಯೋಜನೆ ಮಾಡೇ ಮಾಡ್ತಿವಿ. ಇವರು ಸುಮ್ಮನೆ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬೆಳಗಾವಿಯ 4 ಕಡೆ IT Raid: ಹಲವು ಜ್ಯುವೆಲ್ಲರ್ಸ್ ಸೇರಿ ಮಾಲೀಕರ ಮನೆ ಮೇಲೆ ದಾಳಿ