ಬೆಂಗಳೂರು: ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿ ನಡೆಯುವಾಗ ಶಾಸಕರು ಸಚಿವರನ್ನು ಭೇಟಿ ಮಾಡಿ ಮಾತನಾಡಬೇಡಿ., ಇದರಿಂದ ತೊಂದರೆ ಆಗುತ್ತದೆ. ಪ್ರಶ್ನೋತ್ತರದ ಗಾಂಭೀರ್ಯತೆ ಹೋಗುತ್ತದೆ ಎಂದು ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿವಿಮಾತು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವರು ನಮ್ಮ ಕೈಗೆ ಸಿಗುವುದಿಲ್ಲ. ಅಧಿವೇಶನ ನಡೆಯುವಾಗ ಮಾತ್ರ ಎಲ್ಲಾ ಸಚಿವರು ಸಿಗುತ್ತಾರೆ. ಹಾಗಾಗಿ, ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಶಾಸಕರ ಭೇಟಿಗೆ ಸಮಯ ನಿಗದಿ ಮಾಡಿ ಎಂದರು. ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಮಾಡಿಕೊಳ್ಳಿ ಎಂದು ಸ್ಪೀಕರ್ ಹೇಳಿದರು.
'ಪ್ರಶ್ನೋತ್ತರ ವೇಳೆ ಸಚಿವರೇ ಇಲ್ಲದಿದ್ದರೆ ಹೇಗೆ'?
ವಿಧಾನಸಭೆ ಇಂದಿನ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಸಚಿವರು ಇಲ್ಲದೇ ಇರುವುದನ್ನು ಗಮಮಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಶ್ನೋತ್ತರ ವೇಳೆಯಲ್ಲಿ ಸಚಿವರೇ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಸದನ ಬೆಳಗ್ಗೆ 11.05 ರ ಸುಮಾರಿಗೆ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡ ಸ್ಪೀಕರ್, ಪ್ರಶ್ನೋತ್ತರಕ್ಕೂ ಸಚಿವರು ತಡವಾಗಿ ಬಂದರೆ ಹೇಗೆ? ಉತ್ತರಿಸಬೇಕಾದ ಸಚಿವರು ಎಲ್ಲಿ ಎಂದು ಸರ್ಕಾರದ ಮುಖ್ಯ ಸಚೇತಕರನ್ನು ಪ್ರಶ್ನಿಸಿದರು.