ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದಲ್ಲಿ ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ್ ಮರಾಠಿಯಲ್ಲಿ ಭಾಷಣ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಕುರಿತು ಕನ್ನಡದಲ್ಲಿ ಮಾತನಾಡಬಹುದಿತ್ತು. ಆದರೂ ಮರಾಠಿಯಲ್ಲೇ ಮಾತನಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲರ ಮೇಲೂ ಪ್ರಭಾವ ಬೀರುವ ವ್ಯಕ್ತಿತ್ವ ಛತ್ರಪತಿ ಶಿವಾಜಿ ಅವರದ್ದಾಗಿದೆ. ಅಪ್ಪಟ ದೇಶ ಪ್ರೇಮಿಯಾಗಿದ್ದ ಶಿವಾಜಿ ಯಾವುದೇ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದು ಮರಾಠಿ ಭಾಷೆಯಲ್ಲಿ ಹೇಳಿದರು.
ಸಚಿವ ಸಿ.ಟಿ.ರವಿ ಮಾತನಾಡಿ, ಛತ್ರಪತಿ ಶಿವಾಜಿ ಜನ್ಮವೇ ತಾಳದಿದ್ದರೆ ಇಂದು ನಮ್ಮ ತಾಯಿ ಹಣೆಯ ಮೇಲೆ ಕುಂಕುಮವೇ ಇರುತ್ತಿರಲಿಲ್ಲ. ಅಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಶಿವಾಜಿ ಎಂದಾಕ್ಷಣ ಮರಾಠ ಎಂದು ಹೇಳುವುದು ಸರಿಯಲ್ಲ. ಅವರು ಗಡಿ, ಭಾಷೆ, ಜಾತಿಗೆ ಸೀಮಿತವಲ್ಲ ಎಂದರು.
ಅಲ್ಲದೆ, ದೇಶಕ್ಕೆ ಕೊಡುಗೆ ನೀಡದವರ ಜಯಂತಿಗಳನ್ನೂ ವಿಧಾನಸೌಧದಲ್ಲಿ ಆಚರಿಸುತ್ತೇವೆ. ಅಧಿವೇಶನ ಜರುಗುತ್ತಿರುವ ಕಾರಣ ಈ ಜಯಂತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸುತ್ತಿದ್ದೇವೆ. ವಾಸ್ತವಿಕ ಸತ್ಯವನ್ನು ಹೇಳಿದರೆ ಅದು ಪ್ರಚೋದನೆ ಆಗುವುದಿಲ್ಲ ಎಂದು ಹೇಳಿದರು.
ಹಿಂದೂಗಳು ನಾವೆಲ್ಲಾ ಒಂದೇ ಎನ್ನುವ ಭಾವ ಇರದ ಕಾರಣದಿಂದಲೇ ನಾವು ಪಾಕಿಸ್ತಾನ, ಬಾಂಗ್ಲಾದೇಶ ಕಳೆದುಕೊಂಡವು. ಮರಾಠಿ ಸಮುದಾಯಕ್ಕೆ ಮೀಸಲಾತಿ ಹಾಗೂ 100 ಕೋಟಿ ರೂ. ಅನುದಾನ ಕೊಡಲು ಸಿಎಂ ಗಮನಕ್ಕೆ ತರಲಾಗುವುದು ಎಂದರು.