ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಇಡೀ ಬೆಂಗಳೂರೇ ಬೆಚ್ಚಿಬಿದ್ದಿದೆ. ಇದನ್ನು ಯಶಸ್ವಿಯಾಗಿ ಎದುರಿಸಲು ಹಾಗೂ ಜನರ ಪರದಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಖಾಸಗಿ ಆಸ್ಪತ್ರೆಗಳಿಂದ ಶೇ. 75 ರಷ್ಟು ಬೆಡ್ ಪಡೆಯಬೇಕೆಂದು ಸೂಚಿಸಿದ ಹಿನ್ನೆಲೆ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಖಾಸಗಿ ಆಸ್ಪತ್ರೆಗಳತ್ತ ರೌಂಡ್ಸ್ ಹೊಡೆದು ಬೆಡ್ ನೀಡಲು ನಿರಾಕರಿಸುವ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದು ರಾತ್ರಿಯಿಂದಲೇ ಲಾಕ್ ಡೌನ್ ಜಾರಿ ಮಾಡಿದೆ. ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ನೋಡಿದರೂ ಕೋವಿಡ್ ರೋಗಿಗಳಿಗೆ ಬೆಡ್ ಗಳ ಸಮಸ್ಯೆ ಎದುರಾಗಿದೆ. ಮಹದೇವಪುರ ವಲಯದಲ್ಲಿ ಪ್ರತಿದಿನ 500 ರಿಂದ 600 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅದರಲ್ಲೂ ಐಸಿಯು ಬೆಡ್ ಗಳ ಸಮಸ್ಯೆ ತುಂಬಾನೇ ಬಿಗಡಾಯಿಸಿದೆ.
ಮಹದೇವಪುರ ವಲಯದಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ ಬೆಡ್ ಸಮಸ್ಯೆ ಆಗಬಾರದೆಂದು ಅಧಿಕಾರಿಗಳು, ಜಿಲ್ಲಾಧಿಕಾರಿ, ದಂಡಾಧಿಕಾರಿಗಳ ಸಮೇತ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಲಯ ವ್ಯಾಪ್ತಿಯ ಸಕ್ರ, ರೈಂಬೋ, ವೈದೇಹಿ, ವೈಟ್ ಫೀಲ್ಡ್ ಮಣಿಪಾಲ್, ಎಂವಿಜೆ, ಹಾಗೂ ಈಸ್ಟ್ ಪಾಯಿಂಟ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಶೇ.75 ರಷ್ಟು ಬೆಡ್ ನೀಡುವಂತೆ ತಾಕೀತು ಮಾಡಿದರು.
ಈ ವೇಳೆ ವೈದೇಹಿ ಆಸ್ಪತ್ರೆಯಲ್ಲಿ ಶೇಕಡ 75 ಬೆಡ್ ನೀಡಲು ನಿರಾಕರಿಸಿದಾಗ ಕೂಡಲೇ ಒಪಿಡಿ ಮುಚ್ಚಿಸುವಂತೆ ಮತ್ತು ಕೆಇಬಿ, ನೀರಿನ ಸಂಪರ್ಕ ಎಲ್ಲವೂ ಕಟ್ ಮಾಡಿ ಎಂದು ಸಚಿವರು ಸೂಚನೆ ನೀಡಿದರು. ನಂತರ ಆಸ್ಪತ್ರೆಯ ಮುಖ್ಯ ಆಡಳಿತಗಾರರನ್ನು ಸ್ಥಳಕ್ಕೆ ಬರುವಂತೆ ಸೂಚಿಸಿ ಅವರು ಬರುವವರೆಗೂ ಅಲ್ಲೇ ಕಾದು ಖಡಕ್ಕಾಗಿ ಸರ್ಕಾರದ ಆದೇಶವನ್ನು ಪಾಲಿಸುವಂತೆ ಹೇಳಿದ್ರು. ಇಲ್ಲದಿದ್ದರೆ ಸರ್ಕಾರದಿಂದ ಬರುವ ಯಾವುದೇ ಮೂಲಸೌಕರ್ಯಗಳನ್ನು ಈ ಕ್ಷಣದಿಂದಲೇ ನಿಲ್ಲಿಸಲಾಗುವುದು ಎಂದು ತಿಳಿಸಿದರು. ಸಚಿವರ ಆದೇಶಕ್ಕೆ ಇಡೀ ಆಸ್ಪತ್ರೆ ಆಡಳಿತ ಮಂಡಳಿ ದಂಗಾಗಿ ಶೇಕಡ 75 ಬೆಡ್ ನೀಡಲು ಒಪ್ಪಿದರು.
ಬಳಿಕ ಮಾತನಾಡಿದ ಸಚಿವ ಭೈರತಿ ಬಸವರಾಜ್, ಇಂದು ಮಹದೇವಪುರ ವಲಯದ ಖಾಸಗಿ ಆಸ್ಪತ್ರೆಗಳಾದ ರೈನ್ ಬೋ, ಸಕ್ರ, ವೈಟ್ ಫೀಲ್ಡ್ ಮಣಿಪಾಲ್, ವೈದೇಹಿ, ಹೊಸಕೋಟೆ ಎಂವಿಜೆ, ಈಸ್ಟ್ ಪಾಯಿಂಟ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸರ್ಕಾರ ಆದೇಶದ ಪ್ರಕಾರ ಶೇಕಡ 75ರಷ್ಟು ಬೆಡ್ ಗಳನ್ನು ನೀಡುವಂತೆ ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ಮನವಿ ಮಾಡಲಾಗಿದೆ. ಕೆಲವು ಕಡೆ 75ರಷ್ಟು ಕೊಡಲು ನಿರಾಕರಿಸಿದರು. ಅಂತವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಲಾಗಿದೆ. ಮೂಲಭೂತ ಸೌಕರ್ಯಗಳನ್ನು ನಿಲ್ಲಿಸಲಾಗುವುದು ಎಂದು ತಿಳಿಸಲಾಗಿದೆ. ಎಲ್ಲ ಆಸ್ಪತ್ರೆಗಳು ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಕೆಲವುಕಡೆ ಆಕ್ಸಿಜನ್ ಸಮಸ್ಯೆಯಿದ್ದು ಆಕ್ಸಿಜನ್ ನೀಡುವುದಾದರೆ ಹೆಚ್ಚಿನ ಸಂಖ್ಯೆಯಲ್ಲಿ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ರಾಜ್ಯದ ಜನರು ಸಮಸ್ಯೆಯಲ್ಲಿದ್ದು, ಇಂಥ ಸಂದರ್ಭದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಯವರು ದಯವಿಟ್ಟು ಜನರಪರ ಕೆಲಸ ಮಾಡಿ. ಹೆಚ್ಚು ಬೆಡ್ ಗಳ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ರೋಗವನ್ನು ತಡೆಯುವಲ್ಲಿ ಎಲ್ಲರೂ ಕೈ ಜೋಡಿಸಿ, ಜನರ ಪ್ರಾಣವನ್ನು ಉಳಿಸಿ ಎಂದು ಮನವಿ ಮಾಡಿದರು.