ಬೆಂಗಳೂರು: 1 ರಿಂದ 5ನೇ ತರಗತಿವರೆಗಿನ ಶಾಲೆ ಆರಂಭ ನೋಡಿಕೊಂಡು, ಧೈರ್ಯ ಬಂದರೆ ಪ್ರೈಮರಿ, ಎಲ್‌ಕೆಜಿ, ಯುಕೆಜಿ ಆರಂಭ ಮಾಡ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಲೆ ಆರಂಭಿಸುವ ಎಲ್ಲ ಪ್ರಯತ್ನದಲ್ಲೂ ನಾವು ಯಶಸ್ಸು ಕಂಡಿದ್ದೇವೆ. ಶೇ.20 ರಷ್ಟು ಇನ್ನೂ ಸಫಲವಾಗಿಲ್ಲ, ಅದನ್ನು ಪೂರ್ಣಗೊಳಿಸುತ್ತೇವೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಚೆನ್ನಾಗಿದೆ. ನಾನು ಭೇಟಿ ನೀಡಿದ ಎರಡು ಶಾಲೆಯಲ್ಲೂ 504 ಮಕ್ಕಳ ಹಾಜರಾತಿ ಇತ್ತು. ಉತ್ತಮ ಪ್ರತಿಕ್ರಿಯೆ ಇದೆ. ಶಿಕ್ಷಣ ಇಲಾಖೆಯ ಜೊತೆ ಆರ್‌ಡಿಪಿಆರ್ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಮಕ್ಕಳನ್ನು ಶಾಲೆಗೆ ಕರೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತರುವ ಕೆಲಸ ಮಾಡ್ತಿದ್ದೇವೆ ಎಂದರು.
'ದೊಡ್ಡ ಮಕ್ಕಳು ಶಾಲೆಗೆ ಬರುತ್ತಿಲ್ಲ'
ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ದೊಡ್ಡ ಮಕ್ಕಳು ಶಾಲೆಗೆ ಬರುತ್ತಿಲ್ಲ, ಎಲ್ಲಿ ಹೋಗಿದ್ದಾರೆ ಎಂದು ತಿಳಿಯುತ್ತಿಲ್ಲ. ಅವರನ್ನು ಹುಡುಕಿ ಕರೆತರುವ ಪ್ರಯತ್ನ ಮಾಡುತ್ತೇವೆ. ಚಿಕ್ಕಮಗಳೂರಿನಲ್ಲಿ145 ಮಕ್ಕಳು ಹೊರಗುಳಿದಿದ್ರು, 102 ಮಕ್ಕಳನ್ನು ಕರೆತಂದಿದ್ದೇವೆ ಎಂದು ತಿಳಿಸಿದರು.
ಶಿಕ್ಷಕರ ಕೊರತೆ?
ಶಿಕ್ಷಕರ ಕೊರತೆ ವಿಚಾರವಾಗಿ ಮಾತನಾಡಿ, ಪ್ರೈಮರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. 6 ರಿಂದ 8ನೇ ತರಗತಿವರೆಗಿನ ಶಿಕ್ಷಕರ ಕೊರತೆ ಇದೆ. ಅದನ್ನು ತುಂಬುವ ಕೆಲಸ ಮಾಡ್ತೇವೆ ಎಂದು ಭರವಸೆ ಕೊಟ್ಟರು.
ಮಕ್ಕಳ ಕಲಿಕಾ ಸಂಚಾರಿ ಬಸ್ ಸೇವೆಗೆ ಚಾಲನೆ:
3 ಮಕ್ಕಳ ಕಲಿಕಾ ಸಂಚಾರಿ ಬಸ್ ಸೇವೆಗೆ ಸಚಿವರು ಚಾಲನೆ ನೀಡಿದರು. ಸೇವ್ ದ ಚಿಲ್ಡ್ರನ್ ಸಂಸ್ಥೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಶಾಲಾ ಮಕ್ಕಳಿಗೆ ಪುಸ್ತಕ, ಡಿಜಿಟಲ್ ರೂಪದ ಕಲಿಕಾ ಸಾಮಗ್ರಿ ಹೊಂದಿರುವ ಬಸ್ ಸೇವೆ ಇದಾಗಿದೆ.
ಮುಖ್ಯವಾಗಿ ನಗರದ ಸ್ಲಂ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಸಂಚಾರಿ ಕಲಿಕಾ ಕೇಂದ್ರ ಬಸ್ಗಳಲ್ಲಿ ಸಾಕಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ, ಪುಸ್ತಕ, ಆಟದ ಸಾಮಗ್ರಿ, ಡಿಜಿಟಲ್ ರೂಪದ ಕಲಿಕಾ ಸಾಮಗ್ರಿಗಳನ್ನು ಈ ಬಸ್ ಹೊಂದಿದೆ. ನಗರದಲ್ಲಿ 3 ಸಂಚಾರಿ ಬಸ್ ಸೇವೆಗೆ ಸಿಗಲಿದೆ. ಪ್ರತಿದಿನ ನಗರದ 30 ಬೇರೆ ಬೇರೆ ಪ್ರದೇಶಗಳಲ್ಲಿ ಈ ಬಸ್ ಸಂಚಾರ ನಡೆಸಲಿದೆ. ಮಕ್ಕಳಿಗೆ ಶಿಕ್ಷಣ ಹೇಳಿಕೊಡಲು ಟೀಚರ್ ಸಹ ಬಸ್ ಒಳಗೆ ಇರಲಿದ್ದಾರೆ. ಐದು ಬಾಷೆಯಲ್ಲಿ ಕಲಿಕಾ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಮುಸ್ಲಿಮರಿಗೆ ಅನ್ಯಾಯ ಮಾಡಿದ್ದರೆ ರಾಜಕೀಯ ನಿವೃತ್ತಿ: ಮಾಜಿ ಸಿಎಂ ಬಿಎಸ್ವೈ
ಮಕ್ಕಳ ಕಲಿಕಾ ಸಂಚಾರಿ ಬಸ್ ಸೇವೆಗೆ ಚಾಲನೆ ನೀಡಿದ ಬಳಿಕ ವಿಧಾನಸೌಧದ ಆವರಣದಲ್ಲಿ ಸ್ವತಃ ಶಿಕ್ಷಣ ಸಚಿವರೇ ಬಸ್ ಓಡಿಸಿ ಗಮನ ಸೆಳೆದರು.