ಬೆಂಗಳೂರು: ಚಾಮರಾಜಪೇಟೆ ವ್ಯಾಪ್ತಿಯಲ್ಲಿ 7.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಟ್ರಾಫಿಕ್ ಪೊಲೀಸ್ ಠಾಣೆಯ ಶಂಕುಸ್ಥಾಪನೆ ಕಾರ್ಯವನ್ನು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೆರವೇರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದಿನ ರಸ್ತೆಯಲ್ಲಿ ಇಬ್ಬರು ಕಾನ್ಸ್ಟೇಬಲ್ ಗಾಂಜಾ ಮಾರಾಟ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧಿ ಕೃತ್ಯಗಳಲ್ಲಿ ಭಾಗವಹಿಸುವ ಯಾವುದೇ ಪೊಲೀಸ್ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂತಹ ಹೀನ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ಕೇವಲ ಬೆರಳಣಿಕೆಯಷ್ಟು ಮಂದಿ ಸಿಬ್ಬಂದಿಯಿಂದ ಸುಮಾರು ಒಂದು ಲಕ್ಷಕ್ಕೂ ಮೀರಿ ಇರುವ ಇಲಾಖೆ ಸಿಬ್ಬಂದಿಗೆ ಕೆಟ್ಟ ಹೆಸರು ಬರುತ್ತದೆ. ಅಪರಾಧ ಜಗತ್ತನ್ನು ಬಗ್ಗು ಬಡಿಯಲು ನೇಮಕವಾದ ಸಿಬ್ಬಂದಿ ಅಂತವರೊಂದಿಗೆ ಶಾಮೀಲಾಗುವುದು ಅಕ್ಷಮ್ಯ ಅಪರಾಧ. ಅವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿದರೆ ಸಾಲದು, ಅಂತವರು ಇಲಾಖೆಯಲ್ಲಿ ಇರಬಾರದು. ಈ ಸಂಬಂಧ ಸಂಪೂರ್ಣ ವರದಿ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಭಾರಿ ಪ್ರಮಾಣದ ಲಘು ಸ್ಫೋಟಕ ವಸ್ತುಗಳು ಪತ್ತೆ!