ಬೆಂಗಳೂರು: ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನ ಸಹಜ. ಆದ್ರೆ ನನಗೆ ಅಸಮಾಧಾನವಿಲ್ಲ ಎಂದು ಸಚಿವ ಆನಂದ್ ಸಿಂಗ್ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಖಾತೆ ದೊಡ್ಡದು, ಚಿಕ್ಕದು ಅಂತ ಇಲ್ಲ. ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ. ಯಾವುದೇ ಖಾತೆ ಕೊಟ್ರು ನಿಭಾಯಿಸಿ, ಸಿಎಂಗೆ ಸಹಕಾರ ಕೊಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ. ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸ ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ. ಪರಿಸರ ಖಾತೆಯನ್ನು ಸಹ ನಿಭಾಯಿಸಿದ್ದೇನೆ. ಹಜ್ ಮತ್ತು ವಕ್ಫ್ ಖಾತೆ ನೀಡಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಬೇಕು. ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದ್ರೂ ನಿಭಾಯಿಸುತ್ತೇನೆ. ಇಲ್ಲ ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದ್ರೂ, ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಯುವಕರಿಗೂ ಸ್ಥಾನ ನೀಡಬೇಕಿದೆ ಎಂದು ತಿಳಿಸಿದರು.
ನಮ್ಮ ಪಕ್ಷದ ಹಿರಿಯ ಸದಸ್ಯರು ಸಭೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಿರಿಯರಿಗೂ ಸಚಿವ ಸ್ಥಾನ ನೀಡಬೇಕು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು. ಎಲ್ಲರೂ ನನ್ನಂತೆಯೇ ಇರಬೇಕು ಅಂತೇನಿಲ್ಲ. ನನಗೆ ಯಾವುದೇ ಅಸಮಾಧಾನವಿಲ್ಲ. ಇಂದೇ ಹೊಸ ಖಾತೆಯ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದರು.