ಬೆಂಗಳೂರು: ಕೊರೊನಾ ಟಾಸ್ಕ್ ಫೋರ್ಸ್ ಸಭೆಗೆ ಸಚಿವದ್ವಯರು ಗೈರು ಹಾಜರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಭೆಗೆ ಗೈರಾದವರು.
ಕೊರೊನಾ ಸಂಬಂಧದ ಕಾರ್ಯಪಡೆಯ ಮಹತ್ವದ ಸಭೆಗೆ ಗೈರುಹಾಜರಾಗುವ ಮೂಲಕ ಸಚಿವರು ಬೇಜವಾಬ್ದಾರಿ ಮೆರೆದರಾ ಎಂಬ ಪ್ರಶ್ನೆ ಮೂಡಿದೆ.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಚಿವದ್ವಯರಿಗೆ ಕಾದು ಕುಳಿತಿದ್ದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬಳಿಕ ಸಭೆ ಪ್ರಾರಂಭಿಸಿದರು.
ರಾಜ್ಯದಲ್ಲಿ ದಿನೆ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಕೊರೊನಾ ಸಂಬಂಧದ ಮಹತ್ವದ ಸಭೆಗೆ ಹಾಜರಾಗದೇ ಇರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.