ಬೆಂಗಳೂರು: ಶಾಲೆಗಳಲ್ಲಿ ಮಧಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಹಾಗೂ ಸಹಾಯಕ ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆ ನಿಯಮಗಳು ಅನ್ವಯವಾಗುವುದಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ.
ರಾಜ್ಯದಲ್ಲಿನ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆ-1948ರಡಿ ಸೂಕ್ತ ವೇತನ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಡಾ. ನೌಹೇರಾ ಶೇಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ ಹಂಗಾಮಿ ಮುಖ್ಯ ನ್ಯಾ. ಆಲೋಕ್ ಆರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ದಿನದಲ್ಲಿ ನಾಲ್ಕು ತಾಸು ಕೆಲಸಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಬಿಸಿಯೂಟದ ಸಿಬ್ಬಂದಿ ಕನಿಷ್ಠ ವೇತನ ಪಡೆದುಕೊಳ್ಳಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಕನಿಷ್ಠ ವೇತನ ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ.
ಬಿಸಿಯೂಟ ಯೋಜನೆಯಡಿ ದಿನಕ್ಕೆ ನಾಲ್ಕು ಗಂಟೆಯ ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಈ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕೆಲಸದ ಅವಧಿ 9 ಗಂಟೆ: ಕರ್ನಾಟಕ ಕನಿಷ್ಠ ವೇತನ ಕಾಯ್ದೆಯ ನಿಯಮಗಳು-1958ರ ಪ್ರಕಾರ ದಿನದ ಕೆಲಸದ ಅವಧಿ 9 ಗಂಟೆಯಾಗಿರಬೇಕು. ಈ ಮಾನದಂಡ ಮುಖ್ಯ ಅಡುಗೆ ತಯಾರಕರ ಮತ್ತು ಅಡುಗೆ ತಯಾರಕರ ವಿಚಾರದಲ್ಲಿ ಪಾಲನೆಯಾಗಿಲ್ಲ. ಬಿಸಿಯೂಟದ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕೆಂಬ ವಿಚಾರವು ಕಾಯ್ದೆಯ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ.
ಈ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಬಿಸಿಯೂಟ ಸಿಬ್ಬಂದಿಯ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ 2018ರಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಬಿಸಿಯೂಟ ಕಾರ್ಯಕರ್ತರು ಹಗಲು-ರಾತ್ರಿ ಧರಣಿ ನಡೆಸಿದ್ದರು.
ಈ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬಿಸಿಯೂಟ ಕಾರ್ಯಕರ್ತೆಯರ ಕುಂದು ಕೊರತೆ ಗಮನಿಸಿದ್ದ ಅರ್ಜಿದಾರರು, ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು.
ಫ್ರೀಡಂ ಪಾರ್ಕ್ನಲ್ಲಿಅಹೋರಾತ್ರಿ ಧರಣಿ: ಬಿಸಿಯೂಟ ಕಾರ್ಯಕರ್ತೆಯರು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಆ.17ರಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. 60 ವರ್ಷ ಮೇಲ್ಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಾಗ 1 ಲಕ್ಷ ರೂ ನಿವೃತ್ತಿ ವೇತನ ಕೊಡಬೇಕು. ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು, ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು.
ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂ. ಗಳನ್ನು ಜಾರಿ ಮಾಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ಕಟ್ಟಿಕೊಡಬೇಕು. ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಬಿಸಿಯೂಟ ನೌಕರರ ವೇತನವನ್ನು 5 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಬಿಸಿಯೂಟ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.
(ಇದನ್ನೂ ಓದಿ: ಶಿಕ್ಷಣ, ನೌಕರಿ ಮಾಡುವಂತೆ ಪತ್ನಿಗೆ ಹೇಳುವುದು ಕ್ರೌರ್ಯವಲ್ಲ: ಹೈಕೋರ್ಟ್)