ಬೆಂಗಳೂರು: ಮೂರು ಕೋವಿಡ್ ಪ್ರಕರಣಗಳು ಒಂದೇ ಕಡೆ ಪತ್ತೆಯಾದರೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತಿದೆ. ನಗರದಲ್ಲಿ ಕೊರೊನಾ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ನಗರದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ 60% ಕ್ಕಿಂತ ಹೆಚ್ಚು ಇದೆ. ಅದರೆ ಶೇ.60ರಷ್ಟು ಪ್ರಮಾಣದ ಜನರಲ್ಲಿ ರೋಗ ನಿರೋಧಕ ಶಕ್ತಿ ಇದೆ. ಹೀಗಾಗಿ ಕೋವಿಡ್ ಬಂದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇದೆ ಎಂದರು.
ವ್ಯಾಕ್ಸಿನ್ ಲಭ್ಯತೆ ನಮ್ಮ ಕೈಯಲ್ಲಿಲ್ಲ. ನಮಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಲಸಿಕೆ ಪೂರೈಕೆ ಮಾಡುತ್ತವೆ. ಪ್ರತೀ ದಿನ 70-80 ಸಾವಿರ ವ್ಯಾಕ್ಸಿನ್ ಡೋಸ್ ಲಭ್ಯತೆ ಆಗ್ತಿದೆ. ಖಾಸಗಿ ಸಂಸ್ಥೆಗಳೂ ಕೂಡಾ 30 ಸಾವಿರ ಲಸಿಕೆ ಕೊಡುತ್ತಿದ್ದಾರೆ. ಆದರೆ ಲಭ್ಯತೆ ಕಡಿಮೆ ಆದರೆ ಈ ಪ್ರಮಾಣ ಕಡಿಮೆ ಆಗಲಿದೆ. 70% ಜನಸಂಖ್ಯೆಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 62% ಅಷ್ಟೇ ಆಗಿದೆ. ಬೇರೆ ನಗರಕ್ಕೆ ಇದನ್ನು ಹೋಲಿಸಿದರೆ, ನಮ್ಮ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಜಾಹೀರಾತು ಅಳವಡಿಕೆ- ಸರ್ಕಾರದ ಸೂಚನೆಯಂತೆ ಕ್ರಮ
ಸರ್ಕಾರಕ್ಕೆ ಆರು ತಿಂಗಳ ಹಿಂದೆ ಪ್ರಸ್ತಾವನೆ ನೀಡಲಾಗಿತ್ತು. ನಿನ್ನೆಯಷ್ಟೇ ಜಾಹೀರಾತು ಅಳವಡಿಕೆಗೆ ಸರ್ಕಾರ ಅನುಮೋದನೆ ಸೂಚಿಸಿದೆ. ಇದರ ಪರಿಶೀಲನೆ ಇನ್ನಷ್ಟೇ ಆಗಬೇಕಿದೆ. ನಗರದ ಸೌಂದರ್ಯ, ಸ್ವಚ್ಛತೆಗೆ ಅಡ್ಡಿಯಾಗದ ಹಾಗೆ ಏನು ಮಾಡಬೇಕು ಎಂಬ ನಿರ್ಧಾರಕ್ಕೆ ಬರಲಾಗುವುದು. ಸರ್ಕಾರದಿಂದ ಬಂದಿರುವ ಸೂಚನೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.