ಬೆಂಗಳೂರು: ಕೊರೊನಾ ವೈರಸ್ನಿಂದ ಸಾಕಷ್ಟು ಮಂದಿ ತೊಂದರೆ ಎದುರಿಸುತ್ತಿದ್ದು, ವ್ಯಾಪಾರ ನೆಲಕಚ್ಚಿದೆ. ಅದ್ರೆ ಕೋವಿಡ್ ಸಂಕಷ್ಟದ ನಡುವೆಯೂ ಕಿಲ್ಲರ್ ಕೊರೊನಾ ಒಂದಷ್ಟು ಹೊಸ ವ್ಯಾಪಾರಕ್ಕೆ ನಾಂದಿ ಹಾಡಿದೆ.
ಹೌದು, ಮೊದಲು ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಕೇವಲ ಮೆಡಿಕಲ್ ಶಾಪ್ಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿದ್ದು, ಮೆಡಿಕಲ್ ಶಾಪ್ ಹೊರತು ಪಡಿಸಿ ಬೇರೆ ಅಂಗಡಿಗಳಲ್ಲಿ ಹಾಗೂ ಬೀದಿ ಬದಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಮಾರಾಟ ಶುರು ಮಾಡಿದ್ದಾರೆ. ಇದರ ಜೊತೆ ಬೋಟಿಕ್ ಶಾಪ್ಗಳಲ್ಲಿ ಟೈಲರಿಂಗ್ ಜೊತೆಗೆ ಮಾಸ್ಕ್ಗಳನ್ನು ಸ್ಟಿಚ್ ಮಾಡಿ ಮಾರಾಟ ಮಾಡಲು ಶುರು ಮಾಡಿದ್ದಾರೆ.
ಈ ಹೊಸ ವ್ಯಾಪಾರದ ಬಗ್ಗೆ ಮಾತನಾಡಿರುವ ಬೋಟಿಕ್ ಶಾಪ್ನ ಮಾಲೀಕರಾದ ವಿನಿತಾ ಅಗರ್ವಾಲ್, ಸದ್ಯ ನಾವು ಕೊರೊನಾ ಜೊತೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಆರಂಭದಲ್ಲಿ ಬೆಂಗಳೂರಿನಲ್ಲಿ ಮಾಸ್ಕ್ ಗಳ ಕೊರತೆ ಕಾಣಿಸಿತು, ಇದನ್ನು ಅರಿತು ನಾವು ಸುಮಾರು 45 ಸಾವಿರ ಮಾಸ್ಕ್ ಗಳನ್ಜು ಸ್ಟಿಚ್ ಮಾಡಿ ಉಚಿತವಾಗಿ ಕೊರೊನಾ ವಾರಿಯರ್ಸ್ಗೆ ಹಂಚಿದ್ದೇವೆ. ಆದರೆ, ಈಗ ನಾವು ಅಂಗಡಿ, ಮನೆ ಬಾಡಿಗೆ ಕಟ್ಟಬೇಕು, ನಮ್ಮ ಜೀವನ ನಿರ್ವಹಣೆ ಮಾಡಬೇಕಾದ ಕಾರಣ ಮಾಸ್ಕ್ಗಳನ್ನು ಸ್ಟಿಚ್ ಮಾಡಿ ವಿನಾಯಿತಿ ಬೆಲೆಯಲ್ಲಿ ಮಾರಾಟ ಮಾಡ್ತಿದ್ದೇವೆ. ಇದರ ಜೊತೆ ವ್ಯಾಪಾರ ಮಾಡುವವರು ಹೊರಗಡೆ ಸ್ಯಾನಿಟೈಸರ್ ಬಳಕೆ ಕಡ್ಡಾಯವಾದ ಹಿನ್ನೆಲೆ ಸ್ಯಾನಿಟೈಸರ್ ಸ್ಟಾಂಡ್ಗಳು ಹಾಗೂ ಸ್ಯಾನಿಟೈಸರ್ ಸ್ಪ್ರೇ ಗನ್ ಗಳನ್ನು ಮಾರಾಟ ಮಾಡುತ್ತಿದ್ದೇವೆ. ಹೊಸ ವ್ಯಾಪಾರವಾದರೂ ಕೂಡ ನಮ್ಮ ಕೈ ಹಿಡಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.