ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುವಾಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಆರು ಜನ ಕಾಂಗ್ರೆಸ್ ನಾಯಕರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೋವಿಡ್ ನಿಯಮ ಉಲ್ಲಂಘನೆಯಡಿ ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿಕೆಶಿ, ಸಲೀಂ ಅಹ್ಮದ್ ಸೇರಿ 29 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಸಲೀಂ ಅಹ್ಮದ್, ಹೆಚ್.ಆಂಜನೇಯ, ಪರಮೇಶ್ವರ್ ನಾಯಕ್, ಕೆ.ರಾಜು ಮತ್ತು ಪಾರ್ವತಮ್ಮ ಅವರ ಹಾಜರಾತಿಯನ್ನು ಪರಿಗಣಿಸಿದ ನ್ಯಾಯಾಲಯವು ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಆರೋಪಿಗಳಿಗೆ ಆದೇಶಿಸಿ ಜಾಮೀನು ಮಂಜೂರು ಮಾಡಿದೆ.
ಇದೇ ವೇಳೆ, ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಪುಟ್ಟರಂಗ ಶೆಟ್ಟಿ, ಶಾಸಕಿ ಅಂಜಲಿ ನಿಂಬಾಳ್ಕರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಬಿ.ಆರ್.ಯಾವಗಲ್, ರಘುನಂದ ರಾಮಣ್ಣ, ಕುಸುಮಾ, ಇಕ್ಬಾಲ್ ಹುಸೇನ್, ಕೆ.ಸಿ.ವೀರೇಗೌಡ ಗೈರಾಗಿದ್ದರು. ಇವರುಗಳು ಹಾಜರಾತಿ ವಿನಾಯಿತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದೆ.
ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕಿಮ್ಮನೆ ರತ್ನಾಕರ್, ಕೆ.ವೈ. ನಂಜೇಗೌಡ, ಐವನ್ ಡಿಸೋಜ, ಡಾ. ರವೀಂದ್ರ, ಮೊಹಮ್ಮದ್ ನಲಪಾಡ್ ಮತ್ತು ಬಿ.ಪಿ.ಮಂಜೇಗೌಡ ವಿರುದ್ದ ಮತ್ತೆ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದ್ದು, ಜುಲೈ 7ರಂದು ಹಾಜರಾಗಲು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ : ಕೋವಿಡ್ ನಿಯಮ ಉಲ್ಲಂಘನೆ ಆರೋಪ: ಡಿಕೆಶಿ, ಸಿದ್ದರಾಮಯ್ಯ ಸೇರಿ 41 ಜನರ ವಿರುದ್ಧ ಎಫ್ಐಆರ್