ಬೆಂಗಳೂರು: ಕಾಂಗ್ರೆಸ್ ಎರಡನೇ ಸುತ್ತಿನ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದು, ಇದು ರಾಜಕೀಯ ಪ್ರೇರಿತ ಪಾದಯಾತ್ರೆ, ಕಾಂಗ್ರೆಸ್ ಬೀದಿ ನಾಟಕ ಮಾಡುತ್ತಿರುವುದಾಗಿ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಟೀಕಿಸಿದ್ದಾರೆ. ಮೇಕೆದಾಟು ಯೋಜನೆ ಸಂಬಂಧ ಎರಡನೇ ಹಂತದ ಪಾದಯಾತ್ರೆಯನ್ನು ಕಾಂಗ್ರೆಸಿಗರು ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸದಾನಂದ ಗೌಡ, ಇದು ರಾಜಕೀಯ ಪ್ರೇರಿತವಾದ ಪಾದಯಾತ್ರೆಯಾಗಿದ್ದು, ಇದೊಂದು ಕಾಂಗ್ರೆಸ್ ನ ಬೀದಿ ನಾಟಕವಷ್ಟೇ.
ಕಾಂಗ್ರೆಸ್ ಅವರಿಗೆ ಬೇರೆ ವಿಷಯಗಳು ಇಲ್ಲ ಹೀಗಾಗಿ ಪಾದಯಾತ್ರೆಯ ಗಿಮಿಕ್ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಿಂದ ಯಾವ ಸಾಧನೆಯೂ ಆಗಲ್ಲ. ನಮ್ಮ ಸರ್ಕಾರ ಮೇಕೆದಾಟು ವಿಚಾರದಲ್ಲಿ ಅನೇಕ ಕೆಲಸ ಮಾಡಿದೆ. ನಮಗೆ ಕ್ರೆಡಿಟ್ ಸಿಗಬಾರದು ಎಂದು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಜನರು ಇದನ್ನು ನೂರಕ್ಕೆ ನೂರರಷ್ಟು ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಡಿ ಕೆ ಶಿವಕುಮಾರ್ ಅವರು ಅಧ್ಯಕ್ಷರಾದ ಮೇಲೆ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿ ಮಾಡುವುದೇ ಕೆಲಸವಾಗಿದೆ ಎಂದು ಇದೇ ವೇಳೆ ಸದಾನಂದಗೌಡ ಹೇಳಿದ್ದಾರೆ.
ಭಾರತದ ವಿದೇಶಾಂಗ ನೀತಿ ಬಗ್ಗೆ ಕಾಂಗ್ರೆಸ್ ಟೀಕೆಯ ಕುರಿತು ಮಾತಾನಾಡಿದ ಅವರು, ಭಾರತ ಇಂದು ಜಾಗತಿಕ ವಲಯದಲ್ಲಿ ಹೆಸರು ಮಾಡಿದೆ. ಪ್ರಧಾನಿ ಮೋದಿ ಅವರು ಅಳೆದು ತೂಗಿ ಕೆಲಸ ಮಾಡುತ್ತಿದ್ದಾರೆ. ಭಾರತ ದೇಶದ ಸಂಬಂಧಕ್ಕೆ ಯಾವುದೇ ಧಕ್ಕೆ ಆಗದಂತೆ ಕ್ರಮ ಆಗಬೇಕು, ಈ ಕೆಲಸವನ್ನ ಮೋದಿ ಮಾಡ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ.
ಟಗರಿಗೆ ಟಕ್ಕರ್ ಹೊಡೆದು ಮುಖ್ಯಮಂತ್ರಿ ಆಗೋಕ್ಕೆ ಡಿಕೆ ಶಿವಕುಮಾರ್ ಪ್ರಯತ್ನ- ಅಶ್ವತ್ಥ ನಾರಾಯಣ: ಕಾಂಗ್ರೆಸ್ ಮೇಕೆ ದಾಟು ಯೋಜನೆಯ ಪರವಾಗಿ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯ ಪ್ರೇರಿತ ಅಷ್ಟೇ. ಕರುನಾಡಿನ ಜನರು ಸೇರಿ ಕೈಗೊಳ್ಳಬೇಕಾದ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಕಾಂಗ್ರೆಸ್ ರಾಜಕೀಯ ಲೇಪವನ್ನು ಬಳಿದು ನಾಡಿನ ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಪಾದಯಾತ್ರೆ ರಾಜಕೀಯ ಪ್ರೇರಿತ ದೊಂಬರಾಟ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ತಾನು ,ತನ್ನ ಕುಟುಂಬ, ನಾನೇ ಬೆಳೆಯಬೇಕು, ನಾನೇ ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಬಿಟ್ಟರೆ ಬೇರೆ ಏನು ಇಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರಿಗೆ ಟಕ್ಕರ್ ಹೊಡಿಬೇಕು, ಟಗರಿಗೆ ಟಕ್ಕರ್ ಹೊಡೆದು ಮುಖ್ಯಮಂತ್ರಿ ಆಗಬೇಕು. ಪಕ್ಷದಲ್ಲಿ ಉತ್ತಮ ನಾಯಕ ಅಂತ ತೋರಿಸಿಕೊಳ್ಳಬೇಕು ಅದಕ್ಕೆ ಬ್ರಹ್ಮಾಸ್ತ್ರವಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವುದಾಗಿ ಸಚಿವ ಅಶ್ವತ್ಥ ನಾರಾಯಣ ಕಾಲೆಳೆದರು.
ಕಾಂಗ್ರೆಸ್ ನಿಂದ ಈ ಜನ್ಮದಲ್ಲಿ ಒಂದು ಇಂಚು ಮೇಕೆದಾಟು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಸವಾಲು ಹಾಕಿದರು. ಡಿಎಂಕೆ ಜೊತೆ ಕಾಂಗ್ರೆಸ್ ಕೈ ಜೋಡಿಸಿದ್ದು, ತಮಿಳುನಾಡಿನಲ್ಲಿ ಅವರದ್ದೇ ಸರ್ಕಾರ ಇದೆ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದು ಇದನ್ನು ಮಾಡೋಕೆ ಸಾಧ್ಯವೇ ಇಲ್ಲ. ಇವರ ಜನ್ಮದಲ್ಲಿ ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್ಗೆ ಜಾರಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ರಾಮನಗರ ಅಭಿವೃದ್ಧಿ ಮಾಡಿಲ್ಲ. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಏನು ಕೆಲಸ ಮಾಡಿಲ್ಲ.ರಾಜಕೀಯ ಜನ್ಮ ಪಡೆದು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಡಿಕೆಶಿಯನ್ನು ಟೀಕಿಸಿದರು.
ಓದಿ :ಮುಂದಿನ 24 ಗಂಟೆ ನಮಗೆ ನಿರ್ಣಾಯಕ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್