ಬೆಂಗಳೂರು: ಕೊರೊನಾ ಸೋಂಕಿತ ಮತ್ತು ಶಂಕಿತ ಗರ್ಭಿಣಿಯರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ವಿಲ್ಸನ್ ಗಾರ್ಡನ್ನ 24 ಹಾಸಿಗೆ ಇರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯನ್ನು ನಿಗದಿಪಡಿಸಲಾಗಿದೆ.
ನಗರದಲ್ಲಿ ತುಂಬು ಗರ್ಭಿಣಿಯರಿಗೂ ಕೋವಿಡ್ ಕಾಣಿಸಿಕೊಂಡು, ಸರಿಯಾದ ಸಿಕಿತ್ಸೆ ಸಿಗದ ಹಲವಾರು ದೂರುಗಳು ಬಂದಿವೆ. ಕೌನ್ಸಿಲ್ ಸಭೆಯಲ್ಲೂ ಈ ಬಗ್ಗೆ ಕಾರ್ಪೋರೇಟರ್ಸ್ ಕೂಡಾ ದೂರು ನೀಡಿದ್ದರು. ಈ ಹಿನ್ನೆಲೆ ಬಿಬಿಎಂಪಿ, ಪ್ರತ್ಯೇಕ ಆಸ್ಪತ್ರೆಯನ್ನು ಗರ್ಭಿಣಿಯರಿಗಾಗಿಯೇ ನಿಗದಿ ಮಾಡಿದೆ.
ಕೊರೊನಾ ಸೋಂಕು ಪರೀಕ್ಷೆ ನಡೆಸದೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯೇ ಸೀಲ್ ಡೌನ್ ಮಾಡುವಂತಹ ಪರಿಸ್ಥಿತಿ ಬರುತ್ತದೆ. ಹೀಗಾಗಿ ಹೆರಿಗೆಯ ಹದಿನೈದು ದಿನ ಮೊದಲೇ ಕೊರೊನಾ ಸೋಂಕು ಪರೀಕ್ಷೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆ ಬಿಬಿಎಂಪಿ, ಗರ್ಬಿಣಿಯರಿಗೆ ಆದ್ಯತೆ ನೀಡಿ ಕೊರೊನಾ ಪರೀಕ್ಷೆ ಮಾಡುತ್ತಿದೆ.
ಒಂದು ವೇಳೆ ಪಾಸಿಟಿವ್ ಕಂಡು ಬಂದರೆ ಚಿಕಿತ್ಸೆಗೆ ಹಾಗೂ ಹೆರಿಗೆ ಮಾಡಿಸಲು ವಿಲ್ಸನ್ ಗಾರ್ಡನ್ನ ಬಿಬಿಎಂಪಿ ಆಸ್ಪತ್ರೆಯನ್ನು ನಿಗದಿ ಮಾಡಿರುವುದಾಗಿ ತಿಳಿಸಿ ಪಾಲಿಕೆ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಆದೇಶ ಹೊರಡಿಸಿದ್ದಾರೆ.