ಬೆಂಗಳೂರು : ರಾಜ್ಯಾದ್ಯಂತ ಮಾರ್ಚ್ 28ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಳ್ಳಲಿವೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರ ಹಾಗೂ ಕಾರಿಡಾರ್ನಲ್ಲಿ ಸಿಸಿಟಿವಿ ಅಳವಡಿಸುವಂತೆ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸಂಚಿತ ನಿಧಿಯಿಂದ 40 ಸಾವಿರ ರೂ. ಬಳಸಿಕೊಳ್ಳಲು ಸೂಚಿಸಲಾಗಿದೆ.
ಇದುವರೆವಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇದ್ದಲ್ಲಿ ಅಥವಾ ಈ ಸಾಲಿನಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರವಾಗಿ ಗುರುತಿಸಲಾದ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸದೇ ಇದ್ದಲ್ಲಿ, ಮುಖ್ಯ ಅಧೀಕ್ಷಕರ ಕೊಠಡಿ ಹಾಗೂ ಕಾರಿಡಾರ್ ಸೇರಿ ಒಟ್ಟು 4 ಪಾಯಿಂಟ್ ಒಳಗೊಂಡಂತೆ ಸಿಸಿಟಿವಿಯನ್ನು ಶಾಲೆಯಲ್ಲಿ ಲಭ್ಯವಿರುವ ಶಾಲಾ ಸಂಚಿತ ನಿಧಿಯಿಂದ ಬಳಸಿಕೊಂಡು ಕಡ್ಡಾಯವಾಗಿ ಅಳವಡಿಸುವಂತೆ ಆದೇಶ ಹೊರಡಿಸಲಾಗಿದೆ.
ಒಂದು ವೇಳೆ ಪರೀಕ್ಷಾ ಕೇಂದ್ರದ ಶಾಲೆಯ ಸಂಚಿತ ನಿಧಿಯಲ್ಲಿ ಅನುದಾನ ಲಭ್ಯವಿಲ್ಲದಿದ್ದಲ್ಲಿ ಆ ಕೇಂದ್ರಕ್ಕೆ ಟ್ಯಾಗ್ ಆನ್ ಮಾಡಲಾಗಿರುವ ಯಾವುದೇ ಶಾಲೆಯ ಸಂಚಿತ ನಿಧಿಯಿಂದ ಖರ್ಚು ಭರಿಸಬಹುದು. ಸಿಸಿಟಿವಿ ಖರೀದಿಯಲ್ಲಿ ಕೆಪಿಸಿಸಿ ಕಾಯ್ದೆ-1999ರನ್ವಯ ಖರೀದಿ ನಿಯಮಗಳನ್ನು ಪಾಲಿಸಲು ಸೂಚಿಸಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿನ ಪರೀಕ್ಷಾ ದಿನಗಳ ವಿಡಿಯೋ ದೃಶ್ಯಾವಳಿಗಳನ್ನು ಜಿಲ್ಲಾ ಹಂತದ ಸಮಿತಿಯಲ್ಲಿ ಪರಿಶೀಲಿಸಿ ವರದಿ ನೀಡುವಂತೆಯೂ ಆದೇಶಿಸಲಾಗಿದೆ.
ಸಮಿತಿಯು, ಪರೀಕ್ಷಾ ಕೇಂದ್ರಗಳಿಂದ ಸಲ್ಲಿಕೆಯಾಗುವ ಹಾರ್ಡ್ ಡಿಸ್ಕ್ನಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಪರೀಕ್ಷಾ ಸಮಯದಲ್ಲಿ ನಡೆದ ನಕಲು, ಯಾವುದೇ ರೀತಿಯ ಅಹಿತಕರ ಘಟನೆಗಳು ಹಾಗೂ ಸಿಸಿಟಿವಿಯನ್ನು ಬಂದ್ ಮಾಡಿರುವ ಮಾಹಿತಿಯ ವರದಿಯನ್ನು ಏಪ್ರಿಲ್ 20ರೊಳಗೆ ಸಲ್ಲಿಸಲು ತಿಳಿಸಿದೆ.
ಓದಿ: ಸಗಟು ಡೀಸೆಲ್ ದರದಲ್ಲಿ ಏರಿಕೆ: ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಗೆ ಸಂಕಷ್ಟ