ಬೆಂಗಳೂರು: ಸಚಿವರಾಗಲು ನನಗೆ ಗಡಿಬಿಡಿ ಇಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನನ್ನು ಸಚಿವನಾಗಿ ಮಾಡಿದರೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ನನ್ನ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮಾಡ್ತೇನೆ. ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಇದರಲ್ಲಿ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ರಮೇಶ್ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿ, ಬೆಳಗಾವಿಗೆ ಮತ್ತೊಂದು ಡಿಸಿಎಂ ಸ್ಥಾನ ಕೊಟ್ರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ಕೊಡಬೇಕು ಅನ್ನೋದು ನಮ್ಮ ಆಗ್ರಹ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಸವದಿ ಜೊತೆ ರಮೇಶ್ ಜಾರಕಿಹೊಳಿಯವರಿಗೂ ಡಿಸಿಎಂ ಸ್ಥಾನ ಕೊಟ್ರೆ ಅದೊಂದು ಐತಿಹಾಸಿಕ ಆಗಲಿದೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡೋದು ಸಂತಸ ಎಂದರು.
ಸೋತವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಮಾತನಾಡಿ, ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿ ಶಾಸಕರಾಗಿ ಮಾಡಿದ್ರು. ಹಿರಿಯರಾದ ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ವಿಶ್ವನಾಥ್ ಅವರಿಗೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ವಿಶ್ವನಾಥ್ ಅವರನ್ನೂ ನಮ್ಮ ಜೊತೆಗೆ ಸಚಿವರಾಗಿ ಮಾಡಲಿ ಎಂಬ ಆಸೆ ಇದೆ. ಸಚಿವರನ್ನಾಗಿ ಮಾಡಿದರೆ ಅಧಿವೇಶನಕ್ಕೆ ಎಂಟ್ರಿ ಕೊಡ್ತೇವೆ ಎಂದರು.