ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವಾಗ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ಭಾವಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸುತ್ತಿದ್ದೇನೆ ಎಂದು ರಾಜಕೀಯ ವಿಶ್ಲೇಷಕ ಮತ್ತು ಅಂಕಣಗಾರ ಮಹಾದೇವ ಪ್ರಕಾಶ್ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡದ ಒಂದು ಪ್ರತಿಷ್ಠಿತ ಹಾಗು ಹೆಮ್ಮೆಯ ಪ್ರಶಸ್ತಿಯಾಗಿದೆ. ಕನ್ನಡ ಪತ್ರಿಕೋದ್ಯಮದಲ್ಲಿ 46 ವರ್ಷಗಳ ಸುದೀರ್ಘ ಅನುಭವ, ಸಂಪಾದಕನಾಗಿ, ಅಂಕಣಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇದನ್ನು ಪರಿಗಣಿಸಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವ ನಾನು ಈ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ನನ್ನ ಭಾವನೆ.
ಮುಖ್ಯಮಂತ್ರಿಗಳು ನನ್ನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿದ್ದರೂ, ಅದಕ್ಕೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಗುರಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದೇನೆ. ಇದನ್ನು ಅಹಂಕಾರ ಎಂದು ಯಾರೂ ಪರಿಗಣಿಸಬೇಕಿಲ್ಲ. ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿ ಆಗಬೇಕೇ ಹೊರತು ಮಾರಕ ಆಗಬಾರದು ಎಂದು ಮಹಾದೇವ ಪ್ರಕಾಶ್ ಮನವಿ ಮಾಡಿದ್ದಾರೆ.
1975ರ ಅಕ್ಟೋಬರ್ 15ರಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಆರಂಭಿಸಿದ್ದ "ಲೋಕವಾಣಿ" ದಿನ ಪತ್ರಿಕೆಯ ಮೂಲಕ ನನ್ನ ಪತ್ರಿಕೋದ್ಯಮ ಜೀವನ ಆರಂಭಿಸಿದೆ. ಸದ್ಯ ಕಳೆದ ಹದಿನಾರು ವರ್ಷಗಳಿಂದ 'ಭಾನುವಾರ' ಎನ್ನುವ ನಿಯತಕಾಲಿಕೆಯ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜೊತೆಗೆ ಕಳೆದ ಒಂಭತ್ತು ವರ್ಷಗಳಿಂದ ಕನ್ನಡದ ಹೆಸರಾಂತ ದೈನಿಕ 'ವಿಜಯ ಕರ್ನಾಟಕ' ದಲ್ಲಿ 'ಹೊರಳು ನೋಟ' ಎನ್ನುವ ಹೆಸರಿನ ಅಂಕಣ ಬರೆಯುತ್ತಿದ್ದೇನೆ. ವರ್ತಮಾನದ ರಾಜಕೀಯ ಘಟನಾವಳಿಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಈ ಅಂಕಣ ದೊಡ್ಡ ಪ್ರಮಾಣದಲ್ಲಿ ಓದುಗರನ್ನು ತಲುಪಿದೆ. ಈ ಎಲ್ಲಾ ಅಂಕಣಗಳ ಒಂಬೈನೂರು ಪುಟಗಳ ಸಂಕಲನ 'ಹೊರಳು ನೋಟ' ಎನ್ನುವ ಹೆಸರಿನಲ್ಲಿ ಪ್ರಕಟಗೊಂಡು ಸಾಕಷ್ಟು ಓದುಗರ ಗಮನ ಸೆಳೆದಿದೆ.
ಇದರ ಜೊತೆಗೆ ಕರ್ನಾಟಕದ ಸ್ವಾತಂತ್ರ್ಯ ಪೂರ್ವ ರಾಜಕೀಯ ಇತಿಹಾಸ ಕುರಿತ 'ಆರಂಕುಶಮಿಟ್ಟೊಡಂ ನೆನೆವುದನ್ನ ಮನಂ ಕರ್ನಾಟಕಮಂ' ಕೃತಿ ಐಬಿಎಚ್ ಪ್ರಕಾಶನದಿಂದ ಪ್ರಕಟಗೊಂಡು ದಾಖಲೆ ಸಂಖ್ಯೆಯಲ್ಲಿ ಮಾರಾಟ ಆಗಿದೆ. ಇದರ ಜೊತೆಗೆ 'ಸದನದಲ್ಲಿ ದೇವರಾಜ ಅರಸು' ಕೃತಿ ರಚಿಸಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ 78ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಹೊರತಂದ 'ದಣಿವರಿಯದ ಧೀಮಂತ' ಮುಖ್ಯಮಂತ್ರಿಗಳ ಒಂದು ವರ್ಷದ ಆಡಳಿತದ ಸಂದರ್ಭದಲ್ಲಿ ಸಿದ್ಧಪಡಿಸಿದ 'ಪುಟಕ್ಕಿಟ್ಟ ಚಿನ್ನ' ಕೃತಿಗಳ ಪ್ರಧಾನ ಸಂಪಾದಕ. ನನ್ನ 'ಭಾನುವಾರ' ಮಾಸಿಕದಲ್ಲಿ ಪ್ರಕಟಗೊಂಡ ಸಂಪಾದಕೀಯಗಳ ಸಂಕಲನ 'ಮಾಣಿಕ್ಯದ ದೀಪ್ತಿ', 'ಮುತ್ತಿನ ಹಾರ', 'ಸ್ಪಟಿಕದ ಶಲಾಕೆ' ಇನ್ನೂ ಮುಂತಾದ ಶಿರೋನಾಮೆಯ ಆರು ಸಂಪುಟಗಳು ಸದ್ಯದಲ್ಲಿಯೇ ಪ್ರಕಾಶನಗೊಳ್ಳಲಿವೆ ಎಂದು ಪತ್ರಿಕಾ ರಂಗದಲ್ಲಿನ ತಮ್ಮ ಸೇವೆಯನ್ನು ಪ್ರಸ್ತಾಪಿಸಿದ್ದಾರೆ.