ಬೆಂಗಳೂರು: ಹೊಂಗಸಂದ್ರ ವಾರ್ಡ್ನ ಮದೀನಾ ನಗರದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಸೋಂಕಿತನ (ರೋಗಿ-911) ಮನೆಯ ಅಕ್ಕಪಕ್ಕದ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ರೋಗಿ - 911 ಪ್ರದೇಶದಲ್ಲಿ ಮಾತ್ರವಲ್ಲ, ಉಳಿದ ಮೂವರು ಸೋಂಕಿತರ ಪ್ರದೇಶದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಟಿಪ್ಪು ವೃತ್ತದ ಸುತ್ತಲಿರುವ ನಾಲ್ಕು ಮಸೀದಿಗಳಿಂದ ಅರ್ಧ ಗಂಟೆಗೊಮ್ಮೆ ಲಾಕ್ಡೌನ್ ನಿಯಮ ಪಾಲಿಸುವಂತೆ ಮೈಕ್ ಮೂಲಕ ಘೋಷಿಸಲಾಗುತ್ತದೆ. ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಂದು ಆಯಿಷಾ ಮಸೀದಿ ಕಾರ್ಯದರ್ಶಿ ಚಾಂದ್ ಬೈ ಹೇಳಿದರು.
ಸೋಂಕಿತನ ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದೇನೆ. ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿಲ್ಲ. ಜ್ವರ ಮಾತ್ರ ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ನಾವು (ಮಸೀದಿಗಳು) ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.
ಮದೀನಾ ನಗರ ಟಿಪ್ಪು ವೃತ್ತದ ನಿವಾಸಿಗೆ (ರೋಗಿ-911) ನಿನ್ನೆ ಸೋಂಕು ತಗುಲಿತ್ತು. ಈತ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಮನೆ ಸಮೀಪದ ಸೌಮ್ಯಾ ಕ್ಲಿನಿಕ್ನಲ್ಲಿ ಮೂರು ದಿನ ಚಿಕಿತ್ಸೆ ಪಡೆದುಕೊಂಡಿದ್ದ. ನಂತರ ಡಾ.ಅವಿನಾಶ್ ಸಿಂಗ್ ಅವರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲಿ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹೀಗಾಗಿ, ಆ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ನಂತರ ಸೋಂಕಿತನ ಸೋದರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಇನ್ನೂ ವರದಿ ಬಂದಿಲ್ಲ
ಶಿವಾಜಿನಗರ ಹೌಸ್ ಕೀಪಿಂಗ್ ಯವಕನಿಗೆ ಕೊರೊನಾ ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 22 ಜನರ ಗಂಟಲು ದ್ರವ ಪರೀಕ್ಷೆ ನಡೆಸಲು ಪಾಲಿಕೆ ಮುಂದಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದ 62 ಜನರ ಗಂಟಲು ದ್ರವ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ರಲ್ಲಿ 4 ಮಂದಿಗೆ ಸೋಂಕು ಅಂಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ 3 ದಿನ ನಿರಂತರ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.