ಬೆಂಗಳೂರು: ಮಧ್ಯಪ್ರದೇಶದ ಶಾಸಕರನ್ನು ಕರೆದುಕೊಂಡು ಬರಲು ಅವರೇನು ಮಕ್ಕಳು ಅಥವಾ ಕುರಿ, ಕೋಣಗಳಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಕಾಂಗ್ರೆಸ್ ನಾಯಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಫಲರಾಗಿದ್ದಾರೆ. ಮಧ್ಯಪ್ರದೇಶದ ಶಾಸಕರು ಕರ್ನಾಟಕಕ್ಕೆ ಬಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮದವರ ಬಾಯಿಂದಲೇ ನಾನು ಮಾಹಿತಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ನಾವು ಮಾಡೋದು ಸರೀನಾ ಅಂತ ವಿಚಾರ ಮಾಡಬೇಕು. ಒಂದು ವೇಳೆ ಮಧ್ಯಪ್ರದೇಶ ಶಾಸಕರು ಬೇರೆ ಪಕ್ಷಕ್ಕೆ ಹೋಗಿದ್ರೆ, ಹಣಕ್ಕಾಗಿ ಮತ್ತು ಅಧಿಕಾರದ ಆಸೆಗಾಗಿ ಹೋಗಿದ್ದಾರೆ ಅಂತ ಅರ್ಥ. ಶಾಸಕರಿಗೆ ಅವರ ಬಗ್ಗೆ ಚಿಂತನೆ ಮಾಡುವ ಶಕ್ತಿ ಇರುತ್ತದೆ. ಆ ಪಕ್ಷದಿಂದ ಗೆದ್ದಿದ್ದೇನೆ, ಪಕ್ಷಕ್ಕೆ ದ್ರೋಹ ಬಗೆಯಬಾರದು ಅನ್ನೋ ಯೋಚನೆ ಶಾಸಕರು ಮಾಡಬೇಕು. ಇಲ್ಲವೇ ರಾಜೀನಾಮೆ ಕೊಟ್ಟು ಹೊರಬರಬೇಕು. ನಾವು ಶಾಸಕರನ್ನು ಕರೆದುಕೊಂಡು ಬರಲು ಅವರೇನು ಮಕ್ಕಳಾ ಅಥವಾ ಕುರಿ ಕೋಣಗಳಾ ಎಂದು ಪ್ರಶ್ನಿಸಿದರು.
ಇನ್ನು,ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಪ್ರಕರಣವನ್ನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡು ಸಾರ್ವಜನಿಕರ ಹಣಕ್ಕೆ ಅನ್ಯಾಯ ಮಾಡಿದೆ. ಸುಗಮವಾಗಿ ಕಲಾಪ ನಡೆಯಲು ಕಾಂಗ್ರೆಸ್ ಬಿಡಲಿಲ್ಲ ಎಂದು ಕಿಡಿಕಾರಿದರು. ಒಬ್ಬ ಶಾಸಕನನ್ನ ಹೊರಗಿಟ್ಟು ಕಲಾಪ ನಡೆಸುವಂತೆ ಹೇಳುತ್ತಿರುವುದು ಇತಿಹಾಸದಲ್ಲೇ ಇಲ್ಲ. ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರು ಕಾಂಗ್ರೆಸ್ನಲ್ಲಿ ಇಲ್ಲ. ಈಗಾಗಲೇ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರ ಆಗದೇ ಇರೋದ್ರಿಂದ ಅವರೇ ಮುಂದುವರಿದ್ದಾರೆ. ಹೀಗಾಗಿ ಈ ಬಗ್ಗೆ ಸಿದ್ದರಾಮಯ್ಯ,ದಿನೇಶ್ ಗುಂಡೂರಾವ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.