ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಬಗ್ಗೆ ನೋವಿದೆ. ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆ. ಇಂತಹ ಸಂದರ್ಭಗಳಲ್ಲಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ, ಸಿಎಂಗೂ ಈ ಬಗ್ಗೆ ನೋವಿದೆ. ಇಡೀ ಕುಟುಂಬ ನೋವಿನಲ್ಲಿದೆ. ಇಂತಹ ಸಂದರ್ಭದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರದಲ್ಲಿ 40% ಕಮೀಷನ್ ಶುದ್ಧ ಸುಳ್ಳು. ಕಾಂಗ್ರೆಸ್ನವರಿಗೆ ನಮ್ಮ ಸರ್ಕಾರದ ವಿರುದ್ಧ ಹೇಳಲು ಯಾವುದೇ ವಿಚಾರಗಳಿಲ್ಲ. ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಲು ಹೊರಟಿದೆ. ಇದು ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರ, ಸಿಎಂ, ಗೃಹಸಚಿವರು ಪಾರದರ್ಶಕ ತನಿಖೆ ಮಾಡುತ್ತಾರೆ. ತನಿಖೆ ಬಳಿಕ ವರದಿ ಬರಲಿದೆ. ತನಿಖೆ ನಡೆಯುವ ಮೊದಲೇ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ವರದಿಗೂ ಮೊದಲೇ ಸಿಎಂ ಮೇಲೆ ಆರೋಪ ಮಾಡುವ ನೈತಿಕತೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಹೇಳಿದರು.