ಬೆಂಗಳೂರು: ನಾನೇನು ಸನ್ಯಾಸಿಯಲ್ಲ, ಸಂಪುಟದಲ್ಲಿ ಅವಕಾಶ ಕೊಡಿ ಎಂದು ಕೇಳಿರುವುದು ನಿಜ, ಅವಕಾಶ ಸಿಕ್ಕರೆ ಪಕ್ಷ ಹಾಗೂ ಸರ್ಕಾರಕ್ಕೆ ವರ್ಚಸ್ಸು ತರುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರ ಸಂಬಂಧ ದೆಹಲಿಗೆ ಬಂದಿದ್ದೇನೆ ಯಾವುದೇ ನಾಯಕರ ಸಂಪರ್ಕ ಮಾಡಿಲ್ಲ, ಪ್ರಹ್ಲಾದ್ ಜೋಶಿಯವರಿಗೆ ಕರೆ ಮಾಡಿದ್ದೆ, ಅವರು ಸಿಗುವುದಾಗಿ ತಿಳಿಸಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಕರೆ ಮಾಡಿದ್ದೆ, ಅವರು ಪಕ್ಷದ ಸಭೆಯಲ್ಲಿ ಇದ್ದೇನೆ ಎಂದಿದ್ದಾರೆ ಯಾರು ಯಾರು ಸಿಗುತ್ತಾರೋ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕ್ಷೇತ್ರದ ಕೆಲಸ ಕಾರ್ಯಗಳ ಕುರಿತು ಚರ್ಚೆ ಮಾಡಿದ್ದೇನೆ. ಅವರಿಗೆ ತಿಳಿಸಿಯೇ ದೆಹಲಿಗೆ ಬಂದಿದ್ದೇನೆ. ಮುಖ್ಯಮಂತ್ರಿಗಳು ದೆಹಲಿಗೆ ಬಂದಾಗ ಮಾತ್ರ ಬರುತ್ತೇನೆ ಎನ್ನುವುದು ಸರಿಯಲ್ಲ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ಹಾಗಂತ ನನಗೆ ಅಧಿಕಾರ ಮುಖ್ಯವಲ್ಲ ಸಾಮಾನ್ಯ ವ್ಯಕ್ತಿಯಾಗಿ ಕ್ಷೇತ್ರದ ಮತದಾರರು ಮೂರು ಬಾರಿ ಆಯ್ಕೆ ಮಾಡಿದ್ದಾರೆ ಇದಕ್ಕಿಂತ ದೊಡ್ಡ ಸ್ಥಾನ ಯಾವುದನ್ನು ಬಯಸುವುದಿಲ್ಲ ಎಂದರು.
ನನಗೆ ಅವಕಾಶ ಸಿಕ್ಕರೆ ನೋಡುತ್ತೇವೆ ವರಿಷ್ಠರು ಇದನ್ನೆಲ್ಲ ತೀರ್ಮಾನ ಮಾಡುತ್ತಾರೆ ಚುನಾವಣೆಗೆ ಇನ್ನು 12 ತಿಂಗಳು ಮಾತ್ರ ಬಾಕಿ ಇದೆ. ವ್ಯಕ್ತಿಯ ಸಾಮರ್ಥ್ಯ ಗೊತ್ತಾಗಬೇಕು ಎಂದರೆ ಸ್ವಲ್ಪ ಸಮಯ ಜಾಸ್ತಿ ಬೇಕಾಗಲಿದೆ. ಇಲಾಖೆಯ ಪರಿಶೀಲನಾ ಸಭೆ ಮಾಡಬೇಕು. ಜಿಲ್ಲಾವಾರು ತಾಲೂಕುವಾರು ಸಭೆಗಳನ್ನು ಮಾಡಬೇಕು. ನಾನು ಅಬಕಾರಿ ಮಂತ್ರಿಯಾಗಿ ಅನುಭವ ಹೊಂದಿದ್ದೇನೆ ನನಗೆ ನನ್ನದೇ ಆದ ಅನುಭವ ರಾಜಕೀಯದಲ್ಲಿ ಇದೆ. ಒಬ್ಬ ವ್ಯಕ್ತಿಗೆ ಸಮಯ ಬೇಕು. ಕೇವಲ 12 ತಿಂಗಳಲ್ಲಿ ಏನು ಸಾಧನೆ ಮಾಡಲು ಸಾಧ್ಯ? ಎಂದರು.
ಅವಕಾಶ ಕೇಳಿದ್ದೇನೆ: ಸಂಪುಟದಲ್ಲಿ ಅವಕಾಶ ಸಿಗಲಿದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು. ಅವಕಾಶ ಕೊಡಿ ಎಂದು ನಾನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೇಳಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆ ಬಗ್ಗೆ ಮತ್ತು ಸರ್ಕಾರಕ್ಕೆ ವರ್ಚಸ್ಸು ತರುವ ಕೆಲಸ ಮಾಡುತ್ತೇನೆ. ನಮ್ಮ ನಾಯಕರು, ಮುಖ್ಯಮಂತ್ರಿಗಳು ಅವಕಾಶಕೊಟ್ಟರೆ ನೋಡುತ್ತೇನೆ ಎಂದರು.
ಆಜಾನ್ಗೆ ಮೈಕ್ ಯಾಕೆ?: ಬೆಳಗ್ಗೆ 5 ಗಂಟೆಯಿಂದ ಸಂಜೆವರೆಗೂ ಐದು ಬಾರಿ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾರೆ. ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿ ಇಲ್ಲ ಅದನ್ನು ಮೈಕ್ನಲ್ಲಿಯೇ ಮಾಡಬೇಕಾ? ಕುರಾನ್ನಲ್ಲಿ ಮೈಕ್ನಲ್ಲಿ ನಮಾಜ್ ಮಾಡಿ ಎಂದು ಹೇಳಿದೆಯಾ? ವಿನಾಕಾರಣ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಂಗಳೂರು : ಧ್ವನಿವರ್ಧಕ ವಿಚಾರವಾಗಿ ಮಸೀದಿಗಳಿಗೇ ಅತಿ ಹೆಚ್ಚು ನೋಟಿಸ್