ಬೆಂಗಳೂರು : ವಿಧಾನಸಭೆಯಲ್ಲಿ ಲೋಕಸಭೆ ಸ್ಪೀಕರ್ ಭಾಷಣ ಸದ್ಯ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಹೊಸ ಪರಂಪರೆ ಪ್ರಾರಂಭಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ದಾಖಲೆ ಸಹಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸಭೆಯಲ್ಲಿ 2002 ಜೂನ್ 24ರಂದು ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಅಂದಿನ ಸ್ಪೀಕರ್ ಮನೋಹರ್ ಜೋಶಿ ವಿಧಾನಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆವತ್ತು ಎಸ್ ಎಂ ಕೃಷ್ಣ ಸಿಎಂ ಆಗಿದ್ದರು. ಆ ವೇಳೆ ವೆಂಕಟಪ್ಪ ವಿಧಾನಸಭೆ ಸ್ಪೀಕರ್ ಆಗಿದ್ದರು.
ರಾಜ್ಯದ ವಿಧಾನಸಭೆಗೆ ಲೋಕಸಭೆ ಸ್ಪೀಕರ್ ಅವರನ್ನು ಕರೆದಿರುವುದು ಹೊಸ ಪರಂಪರೆ ಅಲ್ಲ. ಈ ಮುಂಚೆಯೂ ಇದೇ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಲೋಕಸಭೆಯ ಸ್ಪೀಕರ್ ಭಾಷಣ ಮಾಡಿರುವ ಉದಾಹರಣೆ ಇದೆ ಎಂದು ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಇದು ಹೊಸ ಸಂಪ್ರದಾಯವಲ್ಲ ಎಂಬುದನ್ನು ಸ್ಪೀಕರ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಪ್ರಜಾಪ್ರಭುತ್ವದ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಭಾಷಣ ವಿವಾದದ ಕೇಂದ್ರ ಬಿಂದುವಾಗಿತ್ತು. ಸಂಸದೀಯ ವ್ಯವಸ್ಥೆ ಪ್ರಕಾರ ವಿಧಾನಸಭೆಯಲ್ಲಿ ಸದಸ್ಯರು, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ.
ಆದರೆ, ರಾಜ್ಯ ಬಿಜೆಪಿ ಸರ್ಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ಸಭೆ ಮಾಡಿಸಿ ಹೊಸ ಸಂಪ್ರದಾಯ ಹುಟ್ಟು ಹಾಕಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು. ಮಾತ್ರವಲ್ಲದೆ ಇದು ಸಂಸದೀಯ ವ್ಯವಸ್ಥೆಗೆ ವಿರುದ್ಧವಾದದ್ದು ಎಂದು ಬಲವಾಗಿ ಟೀಕಿಸಿತ್ತು ಕಾಂಗ್ರೆಸ್.
ಇತರೆ ವಿಧಾನಸಭೆಯಲ್ಲೂ ಲೋಕಸಭಾ ಸ್ಪೀಕರ್ ಕಾರ್ಯಕ್ರಮ :
- 2000ರ ಮೇನಲ್ಲಿ ಆಂಧ್ರ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಜಿಎಂಸಿ ಬಾಲಯೋಗಿ ಭಾಷಣ
- 2003ರ ಫೆಬ್ರವರಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಭಾಷಣ
- 2011ರಲ್ಲಿ ರಾಜಸ್ಥಾನದ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಭಾಷಣ
- 2015ರಲ್ಲಿ ಉತ್ತರಪ್ರದೇಶ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾಷಣ
- 2016ರಲ್ಲಿ ಗುಜರಾತ್ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾಷಣ