ಬೆಂಗಳೂರು: ಮತ್ತಷ್ಟು ಕಾರ್ಮಿಕರ ವಲಸೆಗೆ ಈ ಲಾಕ್ಡೌನ್ ವಿಸ್ತರಣೆ ಸಾಕ್ಷಿಯಾಗಲಿದೆ. ಹಸಿವಿಗೆ ಮೂರು ಹೊತ್ತು ಊಟ ಹಾಕಲು ಇಂದಿರಾ ಕ್ಯಾಂಟೀನ್ ಇದ್ದರೂ ಸಹ, ಬೀದಿ ಬದಿಯಲ್ಲಿ ವಾಸಿಸುತ್ತಿರುವ ಬಡವರ್ಗದವರು, ಕೂಲಿ ನಂಬಿಕೊಂಡು ಬದುಕುತ್ತಿದ್ದ ಕೂಲಿಕಾರರು, ಬಾಡಿಗೆ ಕಟ್ಟಲಾಗದೆ, ಅಗತ್ಯ ವಸ್ತುಗಳ ಖರೀದಿಗೂ ಹಣ ಇರದೆ ನಗರದ ಬಡ ಮಧ್ಯಮ ವರ್ಗದ ಜನ ನಲುಗಲಿದ್ದಾರೆ.
ಲಾಕ್ಡೌನ್ ಆರಂಭದಲ್ಲೇ ರೈಲಿನ ಮೂಲಕ ಸಾಕಷ್ಟು ವಲಸೆ ಕಾರ್ಮಿಕರು ಊರು ತೊರೆದಿದ್ದರು. ಈಗ ಮತ್ತೆ 14 ದಿನ ಲಾಕ್ಡೌನ್, ಜೂನ್ 7 ರವರೆಗೆ ಮುಂದುವರೆಯುತ್ತಿರುವುದರಿಂದ ಮತ್ತಷ್ಟು ಊರು ತೊರೆಯುವ ಸಾಧ್ಯತೆ ಇದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಅಂಗಡಿ-ಮುಂಗಟ್ಟುಗಳ ಮಾಲೀಕರು ವ್ಯಾಪಾರ ವ್ಯವಹಾರ ಇಲ್ಲದೆ ಕಷ್ಟ ನಷ್ಟದಿಂದ ನಲುಗುತ್ತಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರು, ಟೈಲರ್, ಕಟ್ಟಡ ಕಾರ್ಮಿಕರು, ಹೂವು, ತರಕಾರಿ ಮಾರಾಟಗಾರರಿಗೆ, ದುರ್ಬಲ ವರ್ಗದವರಿಗೆ ಸಮಸ್ಯೆ ಎದುರಾಗಲಿದೆ.
ಮನೆಗೆಲಸದವರಿಗೆ ಕಳೆದ ಒಂದುವರೆ ವರ್ಷದಿಂದ ಕೋವಿಡ್ ಇದ್ದು ಯಾರೂ ಮನೆಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಊರೇ ಬಿಟ್ಟು ಹೋಗುವ ಸ್ಥಿತಿ ಎದುರಾಗಿದೆ. ಮನೆಯಲ್ಲಿ ಅಕ್ಕಿ- ಬೇಳೆಯೂ ಇಲ್ಲ. ಬರೀ 2 ಸಾವಿರ ಲಾಕ್ಡೌನ್ ಪರಿಹಾರ ಇಟ್ಟುಕೊಂಡು ಜೀವನ ಮಾಡಲು ಸಾಧ್ಯ ಇಲ್ಲ ಎಂದು ಮನೆಗೆಲಸ ಮಾಡುವ ಗಿರಿಜಾ ತಿಳಿಸಿದರು.
ಒಬ್ಬೊಬ್ಬರಿಗೂ ಹತ್ತತ್ತು ಕೆ.ಜಿ ಅಕ್ಕಿ ಕೊಡಲಾಗ್ತಿದೆ ಅಂತ ಸರ್ಕಾರ ಹೇಳಿದ್ರೂ, ರೇಷನ್ ಅಂಗಡಿಯಲ್ಲಿ ಕೇವಲ ಆರು ಕೆ.ಜಿ ಕೊಡುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಬೇಕು. ಊಟಕ್ಕೂ ಗತಿ ಇಲ್ಲದೆ ಇದ್ದಾಗ ಮನೆ ಬಾಡಿಗೆ ಕಟ್ಟಲು ಹೇಗೆ ಸಾಧ್ಯ ಅನ್ನೋದು ಈ ಕಾರ್ಮಿಕರ ಅಳಲಾಗಿದೆ.
ಬೇರೆ ರಾಜ್ಯಗಳಲ್ಲಾದರೆ ಬಡ ಕಾರ್ಮಿಕರಿಗೆ ಪರಿಹಾರ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ಈ ಸೌಲಭ್ಯ ಸಿಗುತ್ತಿಲ್ಲ. ಎರಡು ಸಾವಿರ ರೂಪಾಯಿ ಪರಿಹಾರವನ್ನೂ ಹೇಗೆ, ಎಲ್ಲಿ ಪಡೆಯಬೇಕೆಂದು ಗೊತ್ತಾಗುತ್ತಿಲ್ಲ. ಪಿಂಚಣಿ ಹಣ, ವೃದ್ಧಾಪ್ಯ ವೇತನ, ವಿಧವಾ ವೇತನಗಳೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಸಂಕಷ್ಟ ಹೇಳಿಕೊಂಡರು.
ಇದನ್ನೂ ಓದಿ: ಕೋವಿಡ್ ಟೆಸ್ಟ್ ವರದಿ ವಿಳಂಬ: ಸರ್ಕಾರದ ವಿವರಣೆಗೆ ಹೈಕೋರ್ಟ್ ಅಸಮಾಧಾನ