ಬೆಂಗಳೂರು: ಜೂನ್ 15ರವರೆಗೆ ಲಾಕ್ಡೌನ್ ವಿಸ್ತರಿಸಲು ಮುಖ್ಯಮಂತ್ರಿಗಳಿಗೂ ಮನವಿ ಮಾಡುತ್ತೇನೆ. ನಾಳೆ ಬೆಂಗಳೂರು ನಗರದ ಶಾಸಕರ ಸಭೆಯನ್ನೂ ಕರೆದಿದ್ದಾರೆ. ಅಲ್ಲಿಯೂ ಲಾಕ್ಡೌನ್ ಮುಂದುವರೆಸಲು ಮನವಿ ಮಾಡುತ್ತೇನೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಬೆಂಗಳೂರಿನ ಕೆಲ ಸಚಿವರು ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡುವ ಬಗ್ಗೆ ಹೇಳಿದ್ದಾರೆ. ಆದರೆ 15ರವರೆಗೂ ಸಂಪೂರ್ಣ ಲಾಕ್ಡೌನ್ ಇರಬೇಕು. ನಂತರ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನೂ ಇಳಿಮುಖ ಆಗಬೇಕು. ಇಡೀ ರಾಜ್ಯದಲ್ಲಿ ಕೋವಿಡ್ ಪ್ರಕರಣ 500ಕ್ಕಿಂತ ಇಳಿಕೆಯಾದರೆ ಮಾತ್ರ ಲಾಕ್ಡೌನ್ ತೆಗೆಯಬೇಕು. 3ನೇ ಅಲೆಯ ಬಗ್ಗೆಯೂ ತಜ್ಞರು ಹೇಳುತ್ತಿದ್ದಾರೆ. ಅದಕ್ಕೂ ಸಿದ್ಧವಾಗಬೇಕಿದೆ. ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕಾಗಿರುವುದರಿಂದ ಲಾಕ್ಡೌನ್ ಅನಿವಾರ್ಯವಾಗಿದೆ ಎಂದರು.
ಕೆಲವು ಅಗತ್ಯದ ಕೆಲಸ ಹೇಳಿಕೊಂಡು ಜನರು ಓಡಾಟ ನಡೆಸುತ್ತಿದ್ದಾರೆ. ಆದರೆ ಸಾರ್ವಜನಿಕರು ಪರಿಸ್ಥಿತಿ ಅರಿತುಕೊಂಡು ಸುರಕ್ಷಿತವಾಗಿರಲು ಮನೆಯಲ್ಲೇ ಇರಬೇಕು ಎಂದರು.