ಬೆಂಗಳೂರು: ಕೊರೊನಾ ಮಹಾಮಾರಿ ಇರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಹೀಗಾಗಿ ಉತ್ತರ ವಿಭಾಗ ಪೊಲೀಸರು ವಿನೂತನ ಪ್ರಯೋಗ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಡಿಯೋ ಮುಖಾಂತರ ಲಾಕ್ಡೌನ್ ಕುರಿತು ಸಂದೇಶ ರವಾನೆ ಮಾಡಿದ್ದಾರೆ.
ವಿಡಿಯೋ ಮುಖಾಂತರ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಎಸಿಪಿಗಳು ಮಾತನಾಡಿ, ಇಂದು ರಾತ್ರಿ 8 ಗಂಟೆಯಿಂದ 22ರ ಮುಂಜಾನೆ 5 ಗಂಟೆಯವರೆಗೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ.
ಹೀಗಾಗಿ ಎಲ್ಲಾ ಸಿಲಿಕಾನ್ ಸಿಟಿ ಜನ ವಿನಾಕಾರಣ ಮನೆ ಹೊರಗಡೆ ಹಾಗೂ ವಾಹನಗಳಲ್ಲಿ ಸುತ್ತಾಡದೆ ಮನೆಯಲ್ಲಿ ಇರಬೇಕು. ಒಂದು ವೇಳೆ ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಹೊರ ಬಂದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡಿರುವ ಸೂಚನೆ ಪಾಲಿಸಿ. ಲಾಕ್ಡೌನ್ ಯಶಸ್ವಿ ಮಾಡಿ. ಮನೆಯಲ್ಲೇ ಇರಿ, ಕ್ಷೇಮವಾಗಿರಿ. ಪೊಲೀಸ್ ಇಲಾಖೆ ಜೊತೆ ಸಹಕಾರ ನೀಡಿ ಎಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮನವಿ ಮಾಡಿದ್ದಾರೆ.