ಬೆಂಗಳೂರು: ಮೈತ್ರಿ ಸರ್ಕಾರದ ಸಾಲ ಮನ್ನಾಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲವಾ.. ಅಥವಾ ಮಾಡ್ತಿದೆಯಾ ಅನ್ನೋದರ ಕುರಿತಂತೆ ಇವತ್ತು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಬಿರುಸಿನ ಚರ್ಚೆ ಪರಿಷತ್ ಕಲಾಪದಲ್ಲಿ ನಡೆಯಿತು.
ನೆರೆಹಾನಿ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಶ್ರೀಕಾಂತ್ ಘೋಟ್ನೇಕರ್, ಸಾಲ ಮನ್ನಾ ವಿಷಯ ಪ್ರಸ್ತಾಪ ಮಾಡಿದರು. ಮೈತ್ರಿ ಸರ್ಕಾರದ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಲ ಮನ್ನಾ ಮಾಡಿದ್ದ 508 ಕೋಟಿ ಹಣದಲ್ಲಿ 400 ಕೋಟಿ ಬಂದಿದೆ. ಆದರೆ, ನಮ್ಮ ಬ್ಯಾಂಕ್‌ಗೆ ಇನ್ನೂ 108 ಕೋಟಿ ಬಾಕಿ ಇದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದರು.
ಇದಕ್ಕೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಕ್ಷೇಪಿಸಿ, 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಎಂದು ಮರಿತಿಬ್ಬೇಗೌಡ ಹೇಳಿದ್ದಾರೆ. ಯಾಕೆ ಹಣ ಕೊಟ್ಟಿಲ್ಲ ಕೇಳಿ ಎಂದು ಕಾಲೆಳೆದರು. ಇದಕ್ಕೆ ತಿರುಗೇಟು ನೀಡಿದ ಮರಿತಿಬ್ಬೇಗೌಡ, ಸಾಲ ಮನ್ನಾ ಆಗಿದೆ. ಆದರೆ, ಬಾಕಿ ಬಂದಿಲ್ಲ ಅಂತಾ ಹೇಳಿದ್ದಾರೆ. ಬಾಕಿ ಹಣ ಬಿಜೆಪಿ ಸರ್ಕಾರ ಬಂದ ನಂತರದ್ದು.. ಬಿಲ್ ಬಂದ ರೀತಿ ಹಣ ಪಾವತಿ ಮಾಡಬೇಕು, ಅದರಂತೆ ಉತ್ತರ ಕನ್ನಡ ಡಿಸಿಸಿ ಬ್ಯಾಂಕ್‌ಗೆ 108 ಕೋಟಿ ಬಾಕಿ ಇದ್ದು, ಇದು ನಿಮ್ಮ ಸರ್ಕಾರದ ಜವಾಬ್ದಾರಿ, ಹಣ ನೀಡಿ ಎಂದರು.
ಪ್ರತಿಪಕ್ಷ ಸದಸ್ಯರ ತಿರುಗೇಟಿನಿಂದ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ನಾರಾಯಣಸ್ವಾಮಿ ಹೆಣಗಾಡಬೇಕಾಯಿತು. ಖಜಾನೆ ಖಾಲಿ ಆಗಿದೆ, ಅದಕ್ಕೆ ಹಣ ಬರ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದರೂ ಬಿಜೆಪಿ ಸದಸ್ಯರು ಈ ವೇಳೆ ಸುಮ್ಮನೆ ಕೂರುವಂತಾಯಿತು.