ಬೆಂಗಳೂರು: ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್, ಕೋರ್ ಕಮಿಟಿ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಈ ತಿಂಗಳ ಅಂತ್ಯದ ವೇಳೆಗೆ ಪ್ರಕಟಿಸಲು ಸಿದ್ದತೆ ನಡೆಸಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಿನ್ನೆ ಪಕ್ಷದ ಕಚೇರಿಯಲ್ಲಿ ನಡೆದ ಪ್ರಮುಖ ಮುಖಂಡರ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರ ಆಯ್ಕೆ ಹಾಗೂ ಪದಾಧಿಕಾರಿಗಳ ಪುನರ್ ನೇಮಕ ಮಾಡುವ ಬಗ್ಗೆ ಚರ್ಚಿಸಲಾಗಿದೆ. ವಿಭಾಗ ಮಟ್ಟದ ಪದಾಕಾರಿಗಳೂ ಸೇರಿದಂತೆ ಪಕ್ಷವನ್ನು ಪುನರ್ ಸಂಘಟನೆ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ.
ಕೋರ್ ಕಮಿಟಿ ಸದಸ್ಯರ ಆಯ್ಕೆ ಬಹುತೇಕ ಪೂರ್ಣಗೊಂಡಿದ್ದು, ಈ ಪಟ್ಟಿಯನ್ನು ವರಿಷ್ಠರು ಮುಂದಿನ ವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸುಮಾರು 20 ಮಂದಿ ಪ್ರಮುಖರು ಕೋರ್ ಕಮಿಟಿಯಲ್ಲಿ ಸ್ಥಾನ ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ.
ನಿರಂತರವಾಗಿ ಹೆಚ್ಚಳವಾಗುತ್ತಿರುವ ಕೋವಿಡ್ ಮೂರನೇ ಅಲೆಯಿಂದಾಗಿ ಪಕ್ಷದ ಮಹತ್ವದ ಕಾರ್ಯಕ್ರಮವಾದ ಜನತಾ ಜಲಧಾರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ರೂಪುರೇಷೆ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಕೋವಿಡ್ ಪ್ರಮಾಣ ಗಣನೀಯವಾಗಿ ಇಳಿಕೆಯಾದ ನಂತರ ಚಾಲನೆ ನೀಡುವುದು, ಫೆಬ್ರವರಿ ಇಲ್ಲವೇ ಮಾರ್ಚ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಬಗ್ಗೆ ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂಬರುವ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನೂ ಪಕ್ಷ ಗಂಭೀರವಾಗಿ ಪರಿಗಣಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಸಿಎಂ ನಿವಾಸಕ್ಕೆ ಪರೇಡ್: ಯೋಗಕ್ಷೇಮ ವಿಚಾರಿಸೋ ನೆಪದಲ್ಲಿ ಲಾಭಿ ನಡೆಸಿದ ಶಾಸಕರು