ನೆಲಮಂಗಲ : ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿಗೆ ಸಿಬ್ಬಂದಿಯೊಬ್ಬ ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಷಲ್‌ಗಳ ಕೈಗೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ತುಮಕೂರು ರಸ್ತೆಯ ಮಾದವಾರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದ ( ಬಿಐಇಸಿ ) ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿ ಅಲ್ಲಿನ ಸಿಬ್ಬಂದಿಗೆ ಮದ್ಯ ತಂದು ಕೊಡುವಂತೆ ಬೇಡಿಕೆ ಇಟ್ಟಿದ್ದ. ಆತನಿಗೆ ಮದ್ಯ ತೆಗೆದುಕೊಂಡು ಬರುವಾಗ ಗೇಟ್ ಬಳಿ ತಪಾಸಣೆ ನಡೆಸಿದ ಮಾರ್ಷಲ್‌ಗಳ ಕೈಗೆ ಮದ್ಯದ ಬಾಟಲ್ ಸಮೇತ ಸಿಕ್ಕಿ ಬಿದ್ದಿದ್ದಾನೆ. ಸೋಂಕಿತ ವ್ಯಕ್ತಿಯೊಬ್ಬ ಬೇಡಿಕೆ ಇಟ್ಟಿದ್ದರಿಂದ ಕೊಂಡೊಯ್ಯುತ್ತಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.
ರೋಗಿಗಳ ಸಂಬಂಧಿಗಳಿಗೆ ಕೋವಿಡ್ ಸೆಂಟರ್ಗೆ ಪ್ರವೇಶವಿಲ್ಲ. ಇದರಿಂದ ರೋಗಿಗಳು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಸಿಬ್ಬಂದಿ ಮೂಲಕ ಹೊರಗಡೆಯಿಂದ ತರಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಸೋಂಕಿತ ಮದ್ಯವನ್ನು ತರಿಸಿಕೊಂಡಿದ್ದ.
ಸಿಬ್ಬಂದಿ ಚಲಾಯಿಸುತ್ತಿದ್ದ ಬೈಕ್‌ನ ತಡೆದ ಭದ್ರತೆ ಉಸ್ತುವಾರಿ ಹೊತ್ತಿರುವ ಮಾರ್ಷಲ್‌ಗಳು, ಪರಿಶೀಲಿಸಿದಾಗ ಎರಡು ವಿಸ್ಕಿ ಪ್ಯಾಕೇಟ್‌ಗಳು, ನೀರಿನ ಬಾಟಲಿ ಮತ್ತು ಚಿಫ್ಸ್ ಪ್ಯಾಕೇಟ್ ಪತ್ತೆಯಾಗಿವೆ. ಸಿಬ್ಬಂದಿಯನ್ನು ಮಾದನಾಯಕನಹಳ್ಳಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ.