ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಸರ್ಕಾರದ ನಿರ್ಧಾರದ ಪರ-ವಿರೋಧಗಳು ಚರ್ಚೆಯಾಗುತ್ತಿರುವ ನಡುವೆ ಲಿಂಗಾಯತ ಸಮುದಾಯದ ಸಚಿವರು ಸಿಎಂ ನಿವಾಸಕ್ಕೆ ದೌಡಾಯಿಸಿದ್ದು, ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ರಚಿಸುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಸಚಿವರಾದ ವಿ.ಸೋಮಣ್ಣ, ಬಿ.ಸಿ.ಪಾಟೀಲ್ ಭೇಟಿ ನೀಡಿದರು. ಯಡಿಯೂರಪ್ಪರನ್ನು ಭೇಟಿಯಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ನಿರ್ಧಾರದ ನಂತರದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು. ಪರ-ವಿರೋಧ ಚರ್ಚಿಸುತ್ತಿರುವ ಕುರಿತು ಮಾತುಕತೆ ನಡೆಸಿದರು.
ನಂತರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಮುಂದಿಟ್ಟರು. ಪ್ರಸ್ತುತ ಸನ್ನಿವೇಶದಲ್ಲಿ ವೀರಶೈವ ಲಿಂಗಾಯತ ಸಮುದಾಯ ಬಹು ವರ್ಷದ ಬೇಡಿಕೆ ಕಡೆಗಣನೆ ಸಲ್ಲದು. ಸಮುದಾಯಕ್ಕೆ ಬೇರೆಯ ಸಂದೇಶ ರವಾನೆಯಾಗಲಿದೆ.
ಅಲ್ಲದೆ, ಇದು ನಿಗಮ ಸ್ಥಾಪನೆಗೆ ಸಕಾಲವಾಗಿದ್ದು, ಸಮುದಾಯದ ಬೇಡಿಕೆಯನ್ನು ಪರಿಗಣಿಸುವಂತೆ ಒತ್ತಾಯಿಸಿದರು. ಸಚಿವರ ಮನವಿ ಆಲಿಸಿದ ಸಿಎಂ, ನಿಗಮ ಸ್ಥಾಪನೆ ಬೇಡಿಕೆ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ವೀರಶೈವ ಲಿಂಗಾಯತರ ಸಮುದಾಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಮತ್ತು ಹಿಂದುಳಿದವರು ಸೇರಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲ ಕಲ್ಪಿಸುವಂತಾಗಲು ಪ್ರತ್ಯೇಕ ವೀರಶೈವ ಲಿಂಗಾಯತರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದೇವೆ.
ಇದರಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಈ ಸಮುದಾಯದವರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮುದಾಯ ಆಧಾರಿತವಾಗಿ ಮಾಡಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ಸಮುದಾಯದ ವಿಚಾರದಲ್ಲಿ ಸಿಎಂಗೆ ಒತ್ತಡ ಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ವೀರಶೈವ ಲಿಂಗಾಯತ ನಿಗಮದ ಬೇಡಿಕೆ ಹಳೆಯದು. ಆದರೆ, ಮರಾಠ ನಿಗಮ ವಿಚಾರ ಗಡಿ, ಭಾಷಾ ಪ್ರಶ್ನೆ ವ್ಯಾಪ್ತಿಗೆ ಬರುವುದಿಲ್ಲ. ಮರಾಠ ನಿಗಮ ಮಾಡಿರುವುದು ರಾಜ್ಯದ ಮರಾಠಿಗರಿಗೆ ಹೊರತು ಮಹಾರಾಷ್ಟ್ರದ ಮರಾಠಿಗರಿಗೆ ನಿಗಮ ಮಾಡಿಲ್ಲ ಎಂದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಆಕ್ಷೇಪ ಇಲ್ಲ. ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ರಚನೆಗೆ ನಾವು ಒತ್ತಾಯಿಸಿದ್ದೇವೆ. ಜತೆಗೆ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಅಂದಿದ್ದೇವೆ ಎಂದರು.