ಬೆಂಗಳೂರು: ಲಾಕ್‌ಡೌನ್ ನಂತರವೂ ದೈನಂದಿನ ಕೋರ್ಟ್ ಕಲಾಪಗಳನ್ನ ನಡೆಸಲು ವಿಡಿಯೋ ಕಾನ್ಫರೆನ್ಸ್ ಪದ್ಧತಿ ಅಳವಡಿಸಿಕೊಳ್ಳುವ ಸುಪ್ರೀಂಕೋರ್ಟ್ ಆದೇಶಕ್ಕೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ತುರ್ತು ಸಂದರ್ಭಗಳಲ್ಲಿ ಅಥವಾ ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವಿಡಿಯೋ ಕಾನ್ಫರೆನ್ಸಿಂಗ್ ಇಲ್ಲವೇ ಡಿಜಿಟಲ್ ವಿಧಾನಗಳ ಮೂಲಕ ಕೋರ್ಟ್ ಕಲಾಪಗಳನ್ನು ನಡೆಸಬಹುದು. ಆದರೆ, ದೈನಂದಿನ ಕಲಾಪಗಳಿಗೆ ಈ ವಿಧಾನ ಅಳವಡಿಸಿಕೊಳ್ಳುವುದು ನ್ಯಾಯಸಮ್ಮತ ಮತ್ತು ಪ್ರಾಯೋಗಿಕವಲ್ಲ ಎಂದಿದ್ದಾರೆ.
ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕು ಅನ್ನುವುದು ನಿಜ. ಆದರೆ ಯಾವುದೇ ಬದಲಾವಣೆಯನ್ನು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿ, ಪರಾಮರ್ಶೆಗೆ ಒಳಪಡಿಸಿ ಮಾಡಬೇಕು. ಪ್ರಸ್ತಾವಿತ ವಿಡಿಯೋ ಕಾನ್ಫರೆನ್ಸ್ ಪದ್ಧತಿ ಬಗ್ಗೆ ವಕೀಲ ಸಮುದಾಯದಲ್ಲಿ ಸಾಕಷ್ಟು ಕಳವಳ ಇದೆ. ಸದ್ಯದ ಕೋವಿಡ್-19 ಹಿನ್ನೆಲೆಯಲ್ಲಿ ಖುದ್ದು ಹಾಜರಾತಿ, ಮತ್ತಿತರ ಅನಾನುಕೂಲತೆಗಳನ್ನು ತಪ್ಪಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುತ್ತಿರುವುದು ಸ್ವಾಗತಾರ್ಹ.
ಇದರ ಬಗ್ಗೆ ವಕೀಲ ಸಮುದಾಯದಲ್ಲಿ ಅಭ್ಯಂತರವಿಲ್ಲ. ಆದರೆ, ಸಾಮಾನ್ಯ ದಿನಗಳ ದೈನಂದಿನ ಕಲಾಪಗಳಿಗೆ ವಿಡಿಯೋ ಕಾನ್ಫರೆನ್ಸ್ ಪದ್ಧತಿ ಉಚಿತವಲ್ಲ ಎಂದು ಬೆಂಗಳೂರು ವಕೀಲರ ಸಂಘ ಪತ್ರದಲ್ಲಿ ಅಕ್ಷೇಪ ವ್ಯಕ್ತಪಡಿಸಿದೆ.