ಬೆಂಗಳೂರು: ಸರ್ಕಾರ ನನ್ನ ಫೋನ್ ಕದ್ದಾಲಿಕೆ ಮಾಡಿದೆ. ಯಾವ ಸರ್ಕಾರವೂ ಈ ರೀತಿ ಮಾಡಿಲ್ಲ. ಯಡಿಯೂರಪ್ಪನವರೇ ಇದು ಒಳ್ಳೆಯದಲ್ಲ ಎಂದು ವಕೀಲ ಸೂರ್ಯ ಮುಕುಂದ್ ರಾಜ್ ಆರೋಪಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂತ್ರಸ್ತ ಯುವತಿ ನ್ಯಾಯಾಲಯಕ್ಕೆ ಹಾಜರಾದಾಗ ಅಲ್ಲಿ ಕಾಂಗ್ರೆಸ್ನ ಕಾನೂನು ಘಟಕದ ವಕೀಲರಾದ ಸೂರ್ಯ ಮುಕುಂದ್ ರಾಜ್ ಅವರು ಯಾವ ಕಾರಣಕ್ಕಾಗಿ ಅಲ್ಲಿದ್ದರು ಎಂಬ ಬಿಜೆಪಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ವಕೀಲ ಸೂರ್ಯ ಮುಕುಂದ್ ರಾಜ್, ನಾನು ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾದಾಗ ನಾನು ಇದ್ದೆ ಎಂದು ನಿನ್ನೆ ಬಿಜೆಪಿ ಟ್ವೀಟ್ ಮಾಡಿದೆ. ನಾನು ಮೊದಲು ವಕೀಲ. ವಕೀಲನಾಗಿ ಪ್ರಾಮಾಣಿಕವಾಗಿ ನನ್ನ ಸೇವೆ ಬಯಸುವವರ ಪರ ವಕಾಲತ್ತು ವಹಿಸುವುದು ನನ್ನ ಕರ್ತವ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಟ್ಟೆ ಒಗೆದರು, ಇಸ್ತ್ರಿ ಮಾಡಿದ್ರು, ದೋಸೆ ಹಾಕಿದ್ರು.. ವೋಟು ನಿಮಿತ್ತಂ ಬಹುಕೃತ ವೇಷಂ!
ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ನನ್ನ ಸಹಾಯ ಕೇಳಿದ್ದಾರೆ, ಅವರಿಗೆ ನಾನು ಬೆಂಬಲವಾಗಿದ್ದೇನೆ. ಅಲ್ಲದೇ ಯುವತಿಯೂ ನನ್ನ ಪ್ರಕರಣ ಮುನ್ನಡೆಸುವಂತೆ ಕೇಳಿದ್ದಾಳೆ. ಆಕೆ ಏನು ಚಿಕ್ಕ ಮಗು ಅಲ್ಲ. ಬಿಜೆಪಿ ಆಕೆಯ ಪೋಷಕರ ದಾರಿ ತಪ್ಪಿಸುತ್ತಿದೆ. ನ್ಯಾಯಾಂಗದ ನಿಂದನೆ ಮಾಡಬೇಡಿ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಬರುವಂತ ಪ್ರಕರಣ ಇದು. ಈ ಪ್ರಕರಣದಲ್ಲಿ ರಾಜಕೀಯ ಬೇಡ ಎಂದು ಮುಕುಂದ್ ರಾಜ್ ಕಿಡಿಕಾರಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಕೀಲ ಸೂರ್ಯ ಮುಕುಂದ್ ರಾಜ್, ಸರ್ಕಾರ ನನ್ನ ಫೋನ್ ಕದ್ದಾಲಿಕೆ ಮಾಡಿದೆ. ಯಾವ ಸರ್ಕಾರವೂ ಈ ರೀತಿ ಮಾಡಿಲ್ಲ. ಯಡಿಯೂರಪ್ಪನವರೇ ಇದು ಒಳ್ಳೆಯದಲ್ಲ. ಬಸವರಾಜ್ ಬೊಮ್ಮಾಯಿಯವರೇ ನ್ಯಾಯಾಂಗ ವ್ಯವಸ್ಥೆ ಬುಡಮೇಲು ಮಾಡಬೇಡಿ, ನೀವು ಆರೋಪ ಮಾಡ್ತಿರೋದು ನನ್ನ ಮೇಲಲ್ಲ. ನ್ಯಾಯಾಂಗ ವ್ಯವಸ್ಥೆ ಮೇಲೆ, ಮುಖ್ಯ ನ್ಯಾಯಮೂರ್ತಿಗಳ ಮೇಲೆ. ರಮೇಶ್ ಜಾರಕಿಹೊಳಿ ಓರ್ವ ಆರೋಪಿ, ಅವರಿಗೆ ರಕ್ಷಣೆ ನೀಡುವ ಪ್ರಯತ್ನ ಬೇಡ. ದೇಶದ ಜನ ನೋಡ್ತಿದ್ದಾರೆ ಎಚ್ಚರಿಕೆಯಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.