ಬೆಂಗಳೂರು: ವಿಧಾನಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ ಪಾಸ್ ಆಯಿತು.
ವಿಧೇಯಕ ಮತಕ್ಕೆ ಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದ ಹಿನ್ನೆಲೆ ಸಭಾಪತಿಗಳು ಡಿವಿಜನ್ಗೆ ಹಾಕಿದರು. ಮತಕ್ಕೆ ಹಾಕಿದಾಗ 37-21 ಮತಗಳ ಅಂತರದಲ್ಲಿ ವಿಧೇಯಕ ಅನುಮೋದನೆ ಪಡೆಯಿತು.
ಧ್ವನಿಮತದ ಒಪ್ಪಿಗೆ ಬೇಡ, ಡಿವಿಜನ್ಗೆ ಹೋಗಲಿ ಎಂದು ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು. ಆಗ ಸಚಿವ ಅಶೋಕ್ ಕೈ ಎತ್ತಿ ಎಂದು ಸಲಹೆ ನೀಡಿದರು. ಆದರೆ ಕಾಂಗ್ರೆಸ್ ಪಕ್ಷ ಮತ ವಿಭಜನೆಗೆ ಅವಕಾಶ ಕೇಳಿದ ಹಿನ್ನೆಲೆ ಸಭಾಪತಿ ಡಿವಿಜನ್ಗೆ ಹಾಕಿದರು. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ವಿಧೇಯಕ ಎರಡನೇ ಪ್ರಯತ್ನದಲ್ಲಿ ಪಾಸ್ ಆಯಿತು.
ಸರ್ಕಾರದ ಕೈ ಹಿಡಿದ ಜೆಡಿಎಸ್: ಕೊನೆಗೂ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಸಾಥ್ ನೀಡಿತು. ಮರಿತಿಬ್ಬೇಗೌಡರು ಪ್ರತಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಉಳಿದೆಲ್ಲ ಜೆಡಿಎಸ್ ಸದಸ್ಯರು ವಿಧೇಯಕ ಪರವಾಗಿ ಎದ್ದು ನಿಂತು ಬೆಂಬಲ ಸೂಚಿದರು.
ನಗೆಗಡಲು: ಸದಸ್ಯರ ಮತ ವಿಭಜನೆ ವೇಳೆ ಪರ ಹಾಗೂ ವಿರುದ್ಧ ತಲೆ ಎಣಿಕೆ ನಡೆಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಎಡಭಾಗದ ನಾಲ್ಕನೇ ಸಾಲು ಎನ್ನುವ ಬದಲು, ಎಡಭಾಗದ ನಾಲ್ಕನೇ ಸೋಲು ಅಂತ ಬಾಯ್ತಪ್ಪಿ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.