ಬೆಂಗಳೂರು : ಜನವರಿ ಮತ್ತು ಆಗಸ್ಟ್ ತಿಂಗಳು ಬಂತು ಅಂದ್ರೆ ನಗರದ ಜನತೆಗೆ ಥಟ್ ಅಂತ ನೆನಪಾಗೋದು ಲಾಲ್‌ಬಾಗ್‌ನಲ್ಲಿ ನಡೆಯುವ ಅದ್ದೂರಿ ಫ್ಲವರ್ ಶೋ. ಕಳೆದ ವರ್ಷ ಕೋವಿಡ್‌ನಿಂದಾಗಿ ಅದೆಷ್ಟೋ ಜನ ಸೇರುವಂತಹ ಕಾರ್ಯಕ್ರಮಗಳನ್ನ ರದ್ದು ಮಾಡಲಾಗಿದ್ದು, ಇವುಗಳಲ್ಲಿ ಲಾಲ್‌ಬಾಗ್ ಫ್ಲವರ್ ಶೋ ಕೂಡಾ ಒಂದು.
2020ರಲ್ಲಿ ಜನವರಿ ತಿಂಗಳಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ 10 ದಿನಗಳ ಕಾಲ ಫಲ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಆನಂತರ ಕೊರೊನಾ ಭೀತಿ ಹೆಚ್ಚಾದಂತೆ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಲಾಯಿತು. ನಂತರ ಜೂನ್ ತಿಂಗಳಲ್ಲಿ ಕೊಂಚ ಮಟ್ಟಿಗೆ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನ ರದ್ದು ಮಾಡಲಾಯಿತು.
2021ರ ಜನವರಿ ತಿಂಗಳಲ್ಲಿ ನಡೆಯಬೇಕಿದ್ದ ಪ್ರದರ್ಶನವನ್ನು ಎರಡನೇ ಬಾರಿಗೆ ಕೋವಿಡ್ ಕಾರಣದಿಂದಾಗಿ ರದ್ದು ಮಾಡಲಾಯಿತು. ಇದೀಗ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನ ಸತತವಾಗಿ ಮೂರನೇ ಬಾರಿಗೆ ರದ್ದುಗೊಳಿಸಲಾಗಿದೆ. ಯಾಕಂದ್ರೆ ಎರಡನೇ ಅಲೆಯ ಅಬ್ಬರದಿಂದ ಕೊಂಚ ಮಟ್ಟಿಗೆ ನಗರದ ಜನತೆ ಸುಧಾರಿಸಿಕೊಳ್ಳುತ್ತಿರುವಾಗಲೇ ಮೂರನೇ ಅಲೆಯ ಭೀತಿ ಎಲ್ಲರನ್ನ ಕಾಡುತ್ತಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಜನರ ಹಿತದೃಷ್ಟಿಗಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಫ್ಲವರ್ ಶೋನ ರದ್ದು ಮಾಡಿದೆ.
ಪ್ರತೀ ಬಾರಿ 10 ದಿನಗಳ ಕಾಲ ನಡೆಯುತ್ತಿದ್ದ ಫ್ಲವರ್ ಶೋನಲ್ಲಿ ಅತಿ ಹೆಚ್ಚಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬೇಕಾಗಿದ್ದ ಪ್ರ್ಯಾಕ್ಟಿಕಲ್ ವಿದ್ಯಾಭ್ಯಾಸ ಕೂಡ ಆಗುತ್ತಿತ್ತು. ಇನ್ನು ಪ್ರವಾಸಿಗರೂ ಕೂಡ ದೇಶ ವಿದೇಶಗಳಿಂದ ಬರುತ್ತಿದ್ದರು. ಆದ್ರೆ ಕೊರೊನಾ ಇಂದಾಗಿ ಆಗುವ ಹಣಕಾಸಿನ ನಷ್ಟಕ್ಕಿಂತ ವಿದ್ಯಾರ್ಥಿಗಳಿಗೆ ಆಗುವ ನಷ್ಟವನ್ನ ಪರಿಗಣಿಸಬೇಕಾಗಿದ್ದು, ಎಲ್ಲದನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಈ ಬಾರಿಯೂ ಕೂಡ ಫ್ಲವರ್ ಶೋ ರದ್ದು ಮಾಡಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ-ಆತ್ಮಗೌರವದ ಪ್ರತೀಕ ಈ 'ಮೈಸೂರು ಹುಲಿ', ಆಂಗ್ಲರನ್ನ ಅಟ್ಟಲು ಜೀವಿತಾವಧಿಯನ್ನೇ ಮುಡಿಪಿಟ್ಟ!