ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿರುವ ದೊಡ್ಡ ಬಸವೇಶ್ವರ ಜಾತ್ರಾ ಮಹೋತ್ಸವ ಇಂದು ಸಾಂಕೇತಿಕವಾಗಿ ನಡೆಯಿತು.
ಕೋವಿಡ್-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ಬೆಳಗಿನ ಜಾವ ದೊಡ್ಡಬಸವೇಶ್ವರ ರಥೋತ್ಸವ ಎಳೆಯಲು ನಿರ್ಧರಿಸಲಾಗಿತ್ತು. ಆದರೆ, ದೊಡ್ಡಬಸವೇಶ್ವರ ದೇಗುಲದ ಆವರಣದಲ್ಲಿ ಇಂದು ಬೆಳಗಿನ ಜಾವ ಸಹಸ್ರ ಸಂಖ್ಯೆಯ ಭಕ್ತರು ಜಮಾಯಿಸಿರುವುದನ್ನು ಕಂಡ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ದೊಡ್ಡಬಸವೇಶ್ವರ ರಥವನ್ನು ಕೇವಲ ಐದು ಹೆಜ್ಜೆ ಮುಂದೆ ಎಳೆಯುವ ಮೂಲಕ ಮಹಾರಥೋತ್ಸವಕ್ಕೆ ತೆರೆ ಎಳೆದಿದ್ದಾರೆ.
ಭಕ್ತರಿಗೆ ನಿರ್ಬಂಧ:
ಸಾರ್ವನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಮಹಾರಥೋತ್ಸವ ನಿಷೇಧದ ಜೊತೆಗೆ ಭಕ್ತಾದಿಗಳಿಗೆ ದೇಗುಲ ದರ್ಶನಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶರಾವ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಶನಿವಾರದ ಆದೇಶದನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.