ಬೆಂಗಳೂರು: ಕಳೆದ 70 ವರ್ಷಗಳಿಂದ ಕುರುಬರು ಮೀಸಲಾತಿ ಪಡೆಯುವ ಸಂಬಂಧ ಯಾರೂ ಮಾತನಾಡದೇ ಈಗ ಸಮಾಜದ ಜಗದ್ಗುರುಗಳು ಪ್ರಾರಂಭ ಮಾಡಿದ ಮೇಲೆ ಎಲ್ಲರೂ ಎಚ್ಚೆತ್ತುಕೊಂಡಿರುವುದು ದುರ್ದೈವ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಕುರುಬರ ಎಸ್ ಟಿ ಹೋರಾಟ ಸಮಿತಿ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಯಲಿದೆ. ಮುಂದಿನ ಹೋರಾಟದ ರೂಪ ರೇಷೆಗಳನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಈಶ್ವರಾನಂದಪುರಿ ಸ್ವಾಮಿಗಳು ಮತನಾಡಿ, ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ರಾಜ್ಯ ಸರ್ಕಾರ ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿವ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು. ಕೇಂದ್ರ ಸರ್ಕಾರದ ಗಮನ ಸೆಳೆಯಲು ದಕ್ಷಿಣ ಭಾರತದಲ್ಲಿ ಕುರುಬರ ಸಮಾವೇಶ ನಡೆಯಬೇಕಿದೆ. ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಾಜ ನಮ್ಮದಲ್ಲ, ಸಮಾಜದ ಮುಖಂಡರನ್ನು ಪಕ್ಷ ಬೇಧ ಮರೆತು ನಾವು ಬೆಂಬಲಿಸಬೇಕಿದೆ. ಕೊಡಗಿನ ಕುರುಬರು ಈಗಾಗಲೇ ಎಸ್ಟಿ ಪಟ್ಟಿಯಲ್ಲಿರುವುದರಿಂದ ಅದನ್ನೇ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಹಾಗಾಗಿ, ಕುಲಶಾಸ್ತ್ರಿಯ ಅಧ್ಯಯನದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಸಮಿತಿ ರಾಜ್ಯಾಧ್ಯಕ್ಷ ಕೆ ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ ಮುಕುಡಪ್ಪ, ಮಾಜಿ ಸಚಿವ ಶಾಸಕ ಬಂಡೆಪ್ಪ ಖಾಶೆಂಪೂರ್, ಸಮಿತಿ ಖಜಾಂಚಿಯಾದ ಟಿ.ಬಿ.ಬಳಗಾವಿ, ಪ್ರಧಾನ ಕಾರ್ಯದರ್ಶಿಯಾದ ಆನೇಕಲ್ ದೊಡ್ಡಯ್ಯ, ಕಾರ್ಯದರ್ಶಿಯಾದ ಕಾಶಿನಾಥ್ ಹುಡೇದ್, ಸಂಚಾಲಕರಾದ ಎಸ್ ಪುಟ್ಟಸ್ವಾಮಿ ಮತ್ತು ಮುಂತಾದ ಮುಖಂಡರು ಉಪಸ್ಥಿತರಿದ್ದರು.