ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರ ಮನೆಗೆ ಕುರುಬ ಸಮಾಜದ ನಿಯೋಗ ಭೇಟಿ ನೀಡಿ ಗೊಂಡ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.
ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು, ಕಾಗಿನೆಲೆ ಶಾಖಾಮಠ ಹೊಸದುರ್ಗದ ಈಶ್ವರಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬೆಂಗಳೂರಿನಲ್ಲಿರುವ ಸಚಿವರ ಮನೆಗೆ ಭೇಟಿ ನೀಡಿದ ನಿಯೋಗವು ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಯಲ್ಲಿರುವ ಗೊಂಡ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಕುರಿತು ಚರ್ಚೆ ಮಾಡಿದರು.
ನಿಯೋಗದಲ್ಲಿದ್ದ ಬೀದರ್ ಜಿಲ್ಲಾ ಗೊಂಡ (ಕುರುಬ) ಎಂಪ್ಲಾಯ್ಸ್ ಅಸೊಸಿಯೇಶನ್ ಮುಖಂಡರು ಸಮಸ್ಯೆಗಳನ್ನು ವಿವರಿಸಿದರು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು, ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಅಸೋಸಿಯೇಶನ್ನ ಅಧ್ಯಕ್ಷರಾದ ಬಸವರಾಜ್ ಮಾಲಗೆ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.