ಬೆಂಗಳೂರು: ಜೈಲಿನಿಂದ ಹೊರಬಂದು ಗೂಂಡಾಗಿರಿ ಪ್ರದರ್ಶಿಸಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಇದೀಗ ಕುಮಾರಸ್ವಾಮಿ ಲೇಔಟ್ ಪೊಲೀಸರ ಅತಿಥಿಯಾಗಿದ್ದಾರೆ.
ರೌಡಿಶೀಟರ್ಗಳಾದ ಪಳನಿ, ಪುನೀತ್ ಕುಮಾರ್, ಮಹೇಶ, ಮುನಿರಾಜ, ನರಸಿಂಹ, ಶಿವರಾಮ, ಧನುಷ್, ರಾಘವೇಂದ್ರ ಹಾಗೂ ಮೂರ್ತಿ ಬಂಧಿತರು. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಆರೋಪಿಗಳು ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದು, ಗೂಂಡಾ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಸಹಚರರೊಂದಿಗೆ ಸೇರಿ ನಗರದ ವಿವಿಧ ಸ್ಥಳಗಳಲ್ಲಿನ ಭೂ-ವ್ಯಾಜ್ಯ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಭಾಗಿ ಹಾಗೂ ಸಾರ್ವಜನಿಕರಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕುಮಾರಸ್ವಾಮಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಇರುವುದನ್ನು ಅರಿತು ದಾಳಿ ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಪಳನಿ ಕುಖ್ಯಾತ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ 13 ಪ್ರಕರಣಗಳ ದಾಖಲಾಗಿವೆ. ಬನಶಂಕರಿಯ ಅಂಬೇಡ್ಕರ್ ನಗರ ನಿವಾಸಿಯಾಗಿರುವ ಈತ ಚಿಕ್ಕ ವಯಸ್ಸಿನಿಂದಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕುಖ್ಯಾತ ರೌಡಿ ಅರಸಯ್ಯ ಕೊಲೆ ಮಾಡಿತ್ತು ಈ ಗ್ಯಾಂಗ್. 2013ರಲ್ಲಿ ಪಳನಿ ಸಹೋದರ ರಂಗರಾಜುನನ್ನು ರೌಡಿ ಅರಸಯ್ಯ ಗ್ಯಾಂಗ್ ಹಿಂದೆ ಕೊಲೆ ಮಾಡಿತ್ತು. ಪ್ರತೀಕಾರವಾಗಿ 2018ರಲ್ಲಿ ಅರಸಯ್ಯನನ್ನು ಪಳನಿ ಹಾಗೂ ಗ್ಯಾಂಗ್ ಮಂಡ್ಯದಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿತ್ತು. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪಳನಿ ಗ್ಯಾಂಗ್ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿತ್ತು. ವಕೀಲರ ಶುಲ್ಕ ಹಾಗೂ ಇನ್ನಿತರ ಖರ್ಚಿಗಾಗಿ ಮತ್ತೆ ಗೂಂಡಾಗಿರಿಯಲ್ಲಿ ತೊಡಗಿಸಿಕೊಂಡಿತ್ತು.
ಸದ್ಯ ಆರೋಪಿಗಳ ಒಂದು ಕಾರು ಹಾಗೂ ಅವರ ಬಳಿ ಇದ್ದ ಗಾಂಜಾ ಪ್ಯಾಕೇಟ್ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.