ಬೆಂಗಳೂರು: ಹಿಂದೆ ಕೇಂದ್ರದಲ್ಲಿ ದೇವೇಗೌಡರ ಸರ್ಕಾರವನ್ನು ರಾತ್ರೋರಾತ್ರಿ ಬೀಳಿಸಿದವರೇ ಈಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸಿದ್ದು, ಕಾಂಗ್ರೆಸ್ನವರು ನಂಬಿಕೆ ದ್ರೋಹಿಗಳು ಎಂದು ಕುಮಾರಸ್ವಾಮಿ ಅವರಿಗೆ ಅರ್ಥವಾಗಿದೆ. ಹಾಗಾಗಿಯೇ ಬಿಜೆಪಿ ಬೆಂಬಲಿಸುವ ಹೇಳಿಕೆ ನೀಡಿದ್ದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಈಗ ಸತ್ಯದ ಅರಿವಾಗಿದೆ. ಅದಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಒಳ್ಳೆಯ ಸರ್ಕಾರ ಇದೆ. ಮುಂದೆ ಮಧ್ಯಂತರ ಚುನಾವಣೆ ಬಾರದಿರಲಿ ಎನ್ನುವ ಕಾರಣಕ್ಕೆ ಇಂತಹ ಹೇಳಿಕೆ ನೀಡಿರಬಹುದು. ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ ಎಂದರು.
ನಾನು ವಿಷಕಂಠನಾಗಿದ್ದೇನೆ, ವಿಷವನ್ನು ನುಂಗುತ್ತಿದ್ದೇನೆ ಎಂದು ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಮಂಡ್ಯದಲ್ಲಿ, ತುಮಕೂರಿನಲ್ಲಿ ಸೋಲಿಸಿದ್ದು ಯಾರು ಎಂದು ಎಲ್ಲವೂ ಅವರಿಗೆ ಅರಿವಾಗಿದೆ. ಕಾಂಗ್ರೆಸ್ ಈ ದೇಶಕ್ಕೆ ಪಾಪದ ಕೂಸು. ನಾವು ಮೊದಲಿಂದಲೂ ಕಾಂಗ್ರೆಸ್ ನಂಬಬೇಡಿ ಎಂದಿದ್ದೆವು. ಆದರೂ ಅವರು ನಂಬಿದರು. ಈಗ ಅವರಿಗೆ ಅರಿವಾಗಿದೆ. ಅದಕ್ಕಾಗಿಯೇ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.
ಜೆಡಿಎಸ್ನವರು ಯಡಿಯೂರಪ್ಪ ಸರ್ಕಾರವನ್ನು ಬೆಂಬಲಿಸುವ ಮಾತನಾಡಿದ್ದಾರೆ. ಆದರೆ ಸದ್ಯಕ್ಕೆ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸುತ್ತದೆ. ಕಾಂಗ್ರೆಸ್ನಲ್ಲೂ ಆಂತರಿಕ ಭಿನ್ನಮತ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದರು.