ಬೆಂಗಳೂರು: ಕೊರೊನಾ ಲಸಿಕೆ ಕುರಿತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳು ಅವರ ಮನಸ್ಥಿತಿ ತೋರಿಸುತ್ತದೆ. ನಾವೇ ಆ ಲಸಿಕೆ ಪಡೆಯಲು ಸಿದ್ಧರಿದ್ದೇವೆ ಎಂದು ಪ್ರತಿಪಕ್ಷಗಳಿಗೆ ಕುಡುಚಿ ಶಾಸಕ ಪಿ.ರಾಜೀವ್ ಟಾಂಗ್ ಕೊಟ್ಟಿದ್ದಾರೆ.
ಕ್ಯಾಪಿಟಲ್ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ದೇಶದ ವಿಜ್ಞಾನಿಗಳು ಯಶಸ್ವಿಯಾಗಿರುವುದನ್ನು ಸಂತೋಷದಿಂದ ಹೇಳಿಕೊಳ್ಳುತ್ತೇವೆ. ಇಂತಹ ಸಮಯದಲ್ಲಿ ರಾಜಕೀಯ ಹೇಳಿಕೆಗಳು ಬೇಡ ಎಂದರು.
ಇದನ್ನೂ ಓದಿ...ಕೋವಿಡ್ ಲಸಿಕೆ ವಿಚಾರವಾಗಿ ನನ್ನ ಪ್ರಶ್ನೆ ಬಿಜೆಪಿಗೆ ಹೊರತು ವಿಜ್ಞಾನಿಗಳಿಗಲ್ಲ: ಅಖಿಲೇಶ್ ಯಾದವ್
ಅಲ್ಲದೆ, ಪ್ರತಿಪಕ್ಷ ನಾಯಕರ ಇಂತಹ ಹೇಳಿಕೆಗಳು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಮಾಡಿದ ಅಪಮಾನವಾಗುತ್ತದೆ. ಇವತ್ತು ನಾವು ವಿದೇಶಗಳಿಗೆ ಲಸಿಕೆ ಕೊಡುವ ಶಕ್ತಿ ಬೆಳೆಸಿಕೊಂಡಿದ್ದೇವೆ. ಇದಕ್ಕೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ಅಭಿವೃದ್ಧಿ ಬಗ್ಗೆ ಚರ್ಚೆ: ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ನಡೆಸಿದ ಇಂದಿನ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಸರ್ಕಾರ ನಡೆಸಿದ್ದಾರೆ. ನೀವು ಇದೇ ರೀತಿ ಮುನ್ನುಗ್ಗಿ ಅಂತ ಹೇಳಿದ್ದೇವೆ ಎಂದರು.
ಲಸಿಕೆ ಹಾಕಿಸಿಕೊಳ್ಳಲ್ಲ ಎಂದಿದ್ದ ಅಖಿಲೇಶ್: ಬಿಜೆಪಿ ಸರ್ಕಾರ ನೀಡುತ್ತಿರುವ ಕೊರೊನಾ ಲಸಿಕೆಯನ್ನು ನಾನು ಹಾಕಿಸಿಕೊಳ್ಳುವುದಿಲ್ಲ. ನನಗೆ ಬಿಜೆಪಿ ಮೇಲೆ ನಂಬಿಕೆ ಇಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದರು. ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಅವರ ವಿರುದ್ಧ ಕಿಡಿಕಾರಿದ್ದರು. ಈ ಬೆಳವಣಿಗೆಗಳ ನಂತರ ನಾನು ಪ್ರಶ್ನಿಸಿದ್ದು ಬಿಜೆಪಿಗೇ ಹೊರತು ವಿಜ್ಞಾನಿಗಳಿಗಲ್ಲ ಎಂದು ಸ್ಪಷ್ಟಪಡಿಸಿದ್ದರು.