ಬೆಂಗಳೂರು: ಮೂರು ವರ್ಷಗಳ ಹಿಂದೆ ಕೇವಲ 20 ಸಮಾನ ಮನಸ್ಕರು ಸೇರಿ ಆರಂಭಿಸಿದ ಪಕ್ಷ ಇಂದು 18 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಪ್ರತಿ ದಿನ ಸ್ವಯಂ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೆಆರ್ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಹೇಳಿದರು.
ರಾಜ್ಯದಲ್ಲಿನ ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ರಾಜ್ಯಾದ್ಯಂತ ನಿರಂತರವಾಗಿ ಹೋರಾಟ ನಡೆಸುತ್ತಿರುವ, ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ ಆರಂಭವಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ರಾಜ್ಯದಲ್ಲಿ ಇಂದು ಶಿಥಿಲವಾಗಿರುವ ಲೋಕಾಯುಕ್ತರ ಕೆಲಸ ಮಾಡುತ್ತಿರುವ ಕೆಆರ್ಎಸ್ ಪಕ್ಷವನ್ನು ಗಮನಿಸಿರುವ ನಾಡಿನ ಜನರು 'ಜನ ಲೋಕಾಯುಕ್ತ' ಎಂದು ಕರೆಯುತ್ತಿದ್ದಾರೆ ಎಂದರು.
ಪಕ್ಷದ ಕೆಲಸ ಕಾರ್ಯಗಳಿಂದ ಮುಂದಿನ ದಿನಗಳಲ್ಲಿ ಉತ್ತಮ ದಿನಗಳನ್ನು ಕಾಣುವ ಆಶಾ ಭಾವನೆ ಮೂಡಿದೆ. ಪ್ರಮುಖವಾಗಿ ಯುವ ಜನರು, ನಿರ್ಗತಿಕರು, ದುಡಿಯುವ ವರ್ಗದವರಲ್ಲಿ ಹಾಗೂ ಭ್ರಷ್ಟಾಚಾರ ಹೊಗಲಾಡಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದವರು ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದು ಖಂಡಿತ ಸಾಧ್ಯವಿದೆ ಎಂದು ಹೇಳುತ್ತಿದ್ದಾರೆ ಎಂದರು.
ಚಲನ ಶೀಲತೆಗೆ ಹೆಸರಾಗಿದೆ: ಪಕ್ಷ ಆರಂಭವಾಗಿ 3 ವರ್ಷಗಳಲ್ಲಿ ನಿರಂತರವಾಗಿ ಹೋರಾಟ, ಅಭಿಯಾನಗಳನ್ನು ಹಮ್ಮಿಕೊಂಡು ಚಲನಶೀಲತೆಗೆ ಹೆಸರಾಗಿದೆ. ಚಲಿಸು ಕರ್ನಾಟಕ ಸೈಕಲ್ ಯಾತ್ರೆ, ರಾಜ್ಯದ 31 ಜಿಲ್ಲೆಗಳ 30 ದಿನಗಳ 4 ಸಾವಿರ ಕಿ. ಮೀ ಭ್ರಷ್ಟರೇ ಪವಿತ್ರ ರಾಜಕಾರಣ ಬಿಟ್ಟು ತೊಲಗಿ ಬೈಕ್ ಯಾತ್ರೆ, ಎರಡು ಹಂತಗಳಲ್ಲಿ 27 ಜಿಲ್ಲೆಗಳಲ್ಲಿ ಕರ್ನಾಟಕ ಜನಚೈತನ್ಯ ಯಾತ್ರೆ ಹಮ್ಮಿಕೊಂಡಿದೆ. ಜೂನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಬೆಂಗಳೂರು ಪುನಶ್ಚೇತನ ಯಾತ್ರೆ ಹಮ್ಮಿಕೊಂಡಿದ್ದು, ಈ ಯಾತ್ರೆ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ, ಲಂಚಮುಕ್ತ ಅಭಿಯಾನಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವರನ್ನು ಸಬಲೀಕರಣ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಲಾಗಿದೆ ಎಂದರು.
ಚುನಾವಣೆಗೆ ಸಿದ್ದ: ಪಕ್ಷ ಆರಂಭವಾದ ನಂತರ ರಾಜ್ಯದಲ್ಲಿ ನಡೆದಿರುವ ಬಹುತೇಕ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸಿದೆ. ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗುತ್ತಿದೆ ಎಂದರು.
ಸಂಸ್ಥಾಪನಾ ದಿನ: 2019ರ ಆ.10 ರಂದು ಬೆಂಗಳೂರಿನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ದೊರೆಸ್ವಾಮಿ ಹಾಗೂ ನಾಡಿನ ಹೆಸರಾಂತ ಹೋರಾಟಗಾರ ಎಸ್. ಆರ್. ಹಿರೇಮಠ ಪಕ್ಷವನ್ನು ಉದ್ಘಾಟಿಸಿದರು. ಈಗ 3 ವರ್ಷ ಪೂರೈಸಿ 4ನೇ ವರ್ಷಕ್ಕೆ ಕಾಲಿಡಲಿರುವ ಸಂದರ್ಭದಲ್ಲಿ(ಆ.10), ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಸಂಸ್ಥಾಪನಾ ದಿನ ಹಾಗೂ ವಾರ್ಷಿಕ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಅಂದಿಗೆ ಪ್ರಸ್ತುತ ಇರುವ ರಾಜ್ಯ ಕಾರ್ಯಕಾರಿ ಪೂರ್ಣಗೊಳ್ಳಲಿದ್ದು, ಹೊಸ ಕಾರ್ಯಕಾರಿ ಸಮಿತಿ ಆಯ್ಕೆಯಾಗಲಿದೆ.
ಮಧ್ಯಾಹ್ನ ಸಮಿತಿಯ ಕಾಲಾವಧಿ ನಡೆಯಲಿರುವ ಮಹಾ ಅಧಿವೇಶನದಲ್ಲಿ ನಾಡಿನ ಹಿರಿಯ ಹೋರಾಟಗಾರ ಎಸ್. ಆರ್. ಹಿರೇಮಠ ಹಾಗೂ ಖ್ಯಾತ ನ್ಯಾಯವಾದಿ ಕೆ. ವಿ. ಧನಂಜಯ್ ಅತಿಥಿಗಳಾಗಿ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಪದಾಧಿಕಾರಿಗಳು, ಬೆಂಬಲಿಗರು ಹಾಗೂ ಭಾಗವಹಿಸಲಿದ್ದಾರೆ ಎಂದು ಲಿಂಗೇಗೌಡ ಎಂದು ತಿಳಿಸಿದರು.
ಇದನ್ನು ಓದಿ:ಉಸ್ತುವಾರಿ ಕೈ ತಪ್ಪಿದರೂ ತವರು ಜಿಲ್ಲೆಯಲ್ಲೇ ಧ್ವಜಾರೋಹಣ ಅವಕಾಶ ದಕ್ಕಿಸಿಕೊಂಡ ಸಚಿವ ಆನಂದ್ ಸಿಂಗ್