ಬೆಂಗಳೂರು: ಪಿಯುಸಿ, ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪಿತಾಮಹ ಎಂದು ಕುಖ್ಯಾತಿ ಗಳಿಸಿದ್ದ ಶಿವಕುಮಾರಯ್ಯ ಆಲಿಯಾಸ್ ಗುರೂಜಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಜಾಮೀನು ಪಡೆದು ಹೊರಬಂದಿದ್ದ ಶಿವಕುಮಾರಯ್ಯ ಕೆಲ ದಿನಗಳ ಹಿಂದೆ ಕೊರೊನಾ ಪೀಡಿತನಾಗಿ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಸಿರಾಟ ತೊಂದರೆಯಿಂದ ಮಂಗಳವಾರ ಸಾವನ್ನಪ್ಪಿದ್ದಾನೆ.
ಪ್ರಶ್ನೆಪತ್ರಿಕೆ ಸೋರಿಕೆ ಪಿತಾಮಹ, ಕಿಂಗ್ ಪಿನ್ ಎಂದೆಲ್ಲಾ ಕುಖ್ಯಾತಿ ಗಳಿಸಿಕೊಂಡಿದ್ದ ಈತ ದ್ವೀತಿಯ ಪಿಯುಸಿಯ ರಸಾಯನಿಕ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಬಾರಿಗೆ 2016ರಲ್ಲಿ ಪೊಲೀಸರು ಬಂಧಿಸಿದ್ದರು.
ಈತ ಕೇವಲ ಪಿಯುಸಿ ಪ್ರಶ್ನೆಪತ್ರಿಕೆವಲ್ಲದೆ ಕೆಪಿಎಸ್ ಸಿ ಆಯೋಜಿಸುವ ಕಾನ್ಸ್ಟೇಬಲ್, ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ.
ಈತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅನಂತರ ಸಿಐಡಿಗೆ ಹಸ್ತಾಂತರವಾಗಿತ್ತು. ಈತನ ಪತ್ತೆಗಾಗಿ ಅಂದಿನ ಸರ್ಕಾರ 50 ಸಾವಿರ ರೂಪಾಯಿ ಘೋಷಿಸಿತ್ತು. ತಲೆಮರೆಸಿಕೊಂಡಿದ್ದ ಶಿವಕುಮಾರ್ನನ್ನು ಅಂತಿಮವಾಗಿ ನಗರದ ಗಾರ್ವೆಭಾವಿಪಾಳ್ಯ ಬಳಿ ಸಿಐಡಿ ಪೊಲೀಸರು ಬಂಧಿಸಿದ್ದರು.
20ಕ್ಕಿಂತ ಹೆಚ್ಚು ಕೇಸ್ ದಾಖಲು
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ಮಾರಾಟ ಅಕ್ರಮ ಸಂಪಾದನೆ ದಾರಿ ಕಂಡುಕೊಂಡಿದ್ದ ಈತನ ವಿರುದ್ಧ ಬೆಂಗಳೂರು, ತುಮಕೂರು ಹಾಗೂ ಉತ್ತರ ಕರ್ನಾಟಕ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ.
ಮಲ್ಲೇಶ್ವರ ಪೊಲೀಸರು ಶಿವಕುಮಾರಯ್ಯ ವಿರುದ್ಧ ಕೋಕಾ ಕಾಯ್ದೆ ದಾಖಲಿಸಿ ಬಂಧಿಸಿದ್ದರು. ಮೂಲತಃ ತುಮಕೂರಿನಾದರೂ ನಗರದ ನಂದಿನಿ ಲೇಔಟ್ ಮನೆಯೊಂದರಲ್ಲಿ ವಾಸವಾಗಿದ್ದ. ನಿವೃತ್ತ ಉಪನ್ಯಾಸಕನಾಗಿದ್ದ ಈತ ಟ್ಯುಟೋರಿಯಲ್ ನಡೆಸುತ್ತಾ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿಸುತ್ತಿದ್ದನು. ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಚಯಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಗೊತ್ತಿರುವ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣನಾಗುತ್ತಿದ್ದನು.
ಇದನ್ನೂ ಓದಿ: ಗುಜರಾತ್ನಲ್ಲಿ 'ತೌಕ್ತೆ' ಹಾನಿ ಪರಿಶೀಲನೆ ನಡೆಸಲಿರುವ ಪ್ರಧಾನಿ ಮೋದಿ
ಸುಮಾರು ನಾಲ್ಕೈದು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಈತ 2018ರಲ್ಲಿ ಜಾಮೀನು ಪಡೆದು ಹೊರಬಂದಿದ್ದನು. ಮತ್ತೆ ಪೊಲೀಸ್ ನೇಮಕಾತಿ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇದೇ ಆರೋಪದಡಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಡಿಸಿಪಿ ಗಿರೀಶ್ ಅವರು ಬಂಧಿಸಿ ಜೈಲಿಗಟ್ಟಿದ್ದರು.
ಇದೀಗ ಕೊರೊನಾ ಹಿನ್ನೆಲೆಯಲ್ಲಿ ಸಾವನ್ನಪ್ಪಿರುವುದರಿಂದ ಆತನ ಮೇಲಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಳ್ಳಲಿವೆ. ಅದಕ್ಕೂ ಮುನ್ನ ಸಂಬಂಧಪಟ್ಟ ತನಿಖಾಧಿಕಾರಿಗಳು ಆತನ ಮೇಲಿರುವ ಪ್ರಕರಣಗಳ ವಿವರ ಹಾಗೂ ಸಾವನ್ನಪ್ಪಿರುವ ಬಗ್ಗೆ ಪ್ರಮಾಣಪತ್ರ ಕೋರ್ಟ್ಗೆ ನೀಡಲಿದ್ದಾರೆ.